Maski | ಹಾಲಾಪೂರ ನಾಡಕಚೇರಿಯಲ್ಲಿ ಸಿಬ್ಬಂದಿ ಗೈರು : ಸಾರ್ವಜನಿಕರಿಂದ ಆಕ್ರೋಶ

ಮಸ್ಕಿ : ತಾಲ್ಲೂಕಿನ ಹಾಲಾಪೂರ ನಾಡಕಚೇರಿಯಲ್ಲಿ ಸಿಬ್ಬಂದಿಗಳ ಗೈರಿನಿಂದ ಕುರ್ಚಿಗಳು ಖಾಲಿ ಖಾಲಿಯಾಗಿ ಕಂಡುಬಂದಿದ್ದು, ಕಚೇರಿಗೆ ಬಂದ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಲಾಪೂರ ನಾಡಕಚೇರಿಯಲ್ಲಿ ಐದು ಗ್ರಾಮ ಲೆಕ್ಕಾಧಿಕಾರಿಗಳು, ಒಬ್ಬ ಕಂದಾಯ ನಿರೀಕ್ಷಕರು (ಆರ್‌ಐ), ಉಪ ತಹಶೀಲ್ದಾರ್ ಹಾಗೂ ಒಬ್ಬ ಕೇಸ್ ವರ್ಕರ್ ಸೇರಿದಂತೆ ಸಾಕಷ್ಟು ಸಿಬ್ಬಂದಿ ನಿಯೋಜನೆಗೊಂಡಿದ್ದರೂ, ಇಂದು ಬೆಳಗ್ಗೆ 11.30 ಗಂಟೆಯಾದರೂ ಕಚೇರಿಯಲ್ಲಿ ಕೇವಲ ಒಬ್ಬ ಕಂಪ್ಯೂಟರ್ ವರ್ಕರ್ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಉಳಿದ ಯಾವುದೇ ಅಧಿಕಾರಿಗಳು ಹಾಜರಿರಲಿಲ್ಲ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಸುಮಾರು 30ಕ್ಕೂ ಹೆಚ್ಚು ಗ್ರಾಮಗಳನ್ನು ಒಳಗೊಂಡ ದೊಡ್ಡ ನಾಡಕಚೇರಿ ಇದಾಗಿದ್ದು, ಬೆಳಗ್ಗೆ 11.00 ಗಂಟೆಗೆ ಮಲದಗುಡ್ಡ, ಮಲ್ಕಾಪುರ, ತೋರಣದಿನ್ನಿ ಸೇರಿದಂತೆ ದೂರದ ಗ್ರಾಮಗಳಿಂದ ಮಹಿಳೆಯರು ಹಾಗೂ ಸಾರ್ವಜನಿಕರು ಕಚೇರಿಗೆ ಬಂದು ಅಧಿಕಾರಿಗಳಿಗಾಗಿ ಗಂಟೆಗಳ ಕಾಲ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ಅಧಿಕಾರಿಗಳ ಗೈರು ಕಂಡು ಬೇಸತ್ತ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿ ಕೊನೆಗೆ ನಿರಾಸೆಯಿಂದ ಮನೆಗೆ ತೆರಳಿದರು.
ಅಂಗವಿಕಲರು ಸಹ ಕಚೇರಿಗೆ ಬಂದು ಯಾವುದೇ ಅಧಿಕಾರಿ ಇಲ್ಲದ ಕಾರಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಈ ಕುರಿತು ಮಸ್ಕಿ ತಹಶೀಲ್ದಾರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, “ಅಧಿಕಾರಿಗಳು ಬರುತ್ತಾರೆ, ಹೆಚ್ಚು ಕಡಿಮೆ ಆಗುತ್ತದೆ, ಕಾಯಬೇಕು” ಎಂದು ಉತ್ತರಿಸಿ ನಿರ್ಲಕ್ಷ್ಯ ಅಧಿಕಾರಿಗಳ ಪರವಾಗಿ ಸಮರ್ಥನೆ ನೀಡಿದರೆಂದು ಸಾರ್ವಜನಿಕರು ಆಕ್ಷೇಪಿಸಿದರು. ಮಧ್ಯಾಹ್ನ 12 ಗಂಟೆಯಾದರೂ ಸಹ ಅಧಿಕಾರಿಗಳು ಹಾಜರಾಗದಿರುವುದು ಜನರಲ್ಲಿ ಮತ್ತಷ್ಟು ಅಸಮಾಧಾನಕ್ಕೆ ಕಾರಣವಾಯಿತು.
ಇಲ್ಲಿನ ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರು ಹಾಗೂ ಇತರ ಅಧಿಕಾರಿಗಳು ಮಸ್ಕಿಯ ಎಪಿಎಂಸಿಯಲ್ಲಿ ಕಾಣಿಸುತ್ತಾರೆ. ಹಾಲಾಪೂರಕ್ಕೆ ನಾಡಕಚೇರಿ ಬೇಕಾದರೆ ಸರಿಯಾಗಿ ಕಾರ್ಯನಿರ್ವಹಿಸಬೇಕು, ಇಲ್ಲವಾದರೆ ಇದನ್ನು ಮುಚ್ಚಿಬಿಡಲಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ದೂರದ ಗ್ರಾಮಗಳಿಂದ ಬಂದ ಈರನಗೌಡ ದಳಪತಿ, ರವಿ ದೇಸಾಯಿ (ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು), ಕುಮಾರ ಎಂ. (ರಾಮಲದಿನ್ನಿ), ಸಿದ್ಧಾರ್ಥ ಪಿ. ಪಾಟೀಲ್, ಅರಳಪ್ಪ (ಯದ್ದಲದಿನ್ನಿ), ನಾಗಪ್ಪ (ತೋರಣದಿನ್ನಿ), ಅಮರೇಶ (ಜಂಗಮರಳ್ಳಿ), ಮುದುಕಪ್ಪ, ಮಂಜುಳಾ ಸೇರಿದಂತೆ ಅನೇಕ ಅಂಗವಿಕಲರು ಮತ್ತು ಮಹಿಳೆಯರು ತಮ್ಮ ಅಳಲನ್ನು ವ್ಯಕ್ತಪಡಿಸಿದರು.







