ಭೂಮಾನಂದ, ಅಶ್ವಿನಿ, ರಾಣೆಮ್ಮ ಹತ್ಯೆ ಖಂಡಿಸಿ ರಾಯಚೂರಿನಲ್ಲಿ ಬೃಹತ್ ಪ್ರತಿಭಟನೆ

ರಾಯಚೂರು: ದಲಿತ ಮುಖಂಡ ಭೂಮಾನಂದ, ಯುವತಿ ಅಶ್ವಿನಿ ಹಾಗೂ ಮಹಿಳೆ ರಾಣೆಮ್ಮ ಅವರ ಕೊಲೆ ಪ್ರಕರಣಗಳನ್ನು ಖಂಡಿಸಿ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿ ಸೋಮವಾರ ರಾಯಚೂರಿಗೆ ತಲುಪಿ ಸಮಾಪ್ತಿಯಾಯಿತು. ಬಳಿಕ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಬಹಿರಂಗ ಪ್ರತಿಭಟನಾ ಸಭೆ ನಡೆಯಿತು.
ಭಾನುವಾರ ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದಿಂದ ಆರಂಭಗೊಂಡ ಬೈಕ್ ರ್ಯಾಲಿ ರಾಯಚೂರು ತಾಲೂಕಿನ ಅಸ್ಕಿಹಾಳ ಗ್ರಾಮಕ್ಕೆ ತಲುಪಿ, ಹರ್ಷಿತಾ ಗಾರ್ಡನ್‌ನಲ್ಲಿ ವಾಸ್ತವ್ಯ ಹೂಡಿತ್ತು. ಸೋಮವಾರ ಮಧ್ಯಾಹ್ನ 12.30ಕ್ಕೆ ರ್ಯಾಲಿ ಮತ್ತೆ ಆರಂಭಗೊಂಡು ರಾಯಚೂರು ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ತಲುಪಿತು.
ಪ್ರತಿಭಟನಾ ಸಭೆಯಲ್ಲಿ ದಲಿತಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಎಸ್. ಮಾರೆಪ್ಪ ವಕೀಲರು ಮಾತನಾಡಿ, ರಾಯಚೂರು ಜಿಲ್ಲೆಯಲ್ಲಿ ದಲಿತ ಸಮುದಾಯವು ಎರಡನೇ ಅತಿದೊಡ್ಡ ಜನಸಂಖ್ಯೆ ಹೊಂದಿದ್ದರೂ ಕಳೆದ 25 ವರ್ಷಗಳಿಂದ ಸಮರ್ಪಕ ರಾಜಕೀಯ ಪ್ರಾತಿನಿಧ್ಯದಿಂದ ವಂಚಿತವಾಗಿದೆ. ಜಿಲ್ಲಾಡಳಿತದಲ್ಲಿಯೂ ದಲಿತರ ಪಾತ್ರ ಕಡಿಮೆಯಾಗಿರುವುದು ಇಂತಹ ಪರಿಸ್ಥಿತಿಗೆ ಪ್ರಮುಖ ಕಾರಣವಾಗಿದೆ ಎಂದು ಆರೋಪಿಸಿದರು.
ದೇವದುರ್ಗ ತಾಲೂಕಿನ ಸುಂಕೇಶ್ವರಹಾಳ–ಹದ್ದಿನಾಳ ಮುಖ್ಯ ರಸ್ತೆಯಲ್ಲಿ ಸಾರ್ವಜನಿಕರ ಮುಂದೆಯೇ ಬಹುಜನ ಮುಖಂಡ ಭೂಮಾನಂದ ಅವರನ್ನು ಹತ್ಯೆ ಮಾಡಲಾಗಿದೆ. ಪ್ರಕರಣದ ಎಲ್ಲ ಆರೋಪಿಗಳನ್ನು ಇದುವರೆಗೆ ಬಂಧಿಸದಿರುವುದು ಆತಂಕಕಾರಿ ಬೆಳವಣಿಗೆ ಎಂದು ಅವರು ಹೇಳಿದರು.
ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದ ಪದವೀಧರೆ ಅಶ್ವಿನಿ ಅವರ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಅತ್ಯಂತ ಕ್ರೂರವಾಗಿದ್ದು, ಪ್ರಕರಣದ ತನಿಖೆಯನ್ನು ಪಾರದರ್ಶಕವಾಗಿ ಹಾಗೂ ನಿಷ್ಪಕ್ಷಪಾತವಾಗಿ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಲಿಂಗಸುಗೂರು ತಾಲೂಕಿನ ಕರಡಕಲ್ ಗ್ರಾಮದ ರಾಣೆಮ್ಮ ಅವರನ್ನು ಅಪಹರಿಸಿ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಪ್ರಕರಣದ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು. ಕೇವಲ 15 ದಿನಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಮೂರು ದಲಿತ ಸಮುದಾಯಕ್ಕೆ ಸಂಬಂಧಿಸಿದ ಕೊಲೆ ಪ್ರಕರಣಗಳು ನಡೆದಿರುವುದು ಕಳವಳಕಾರಿ. ಮೂರು ಪ್ರಕರಣಗಳಲ್ಲೂ ಎಲ್ಲ ಆರೋಪಿಗಳನ್ನು ಇನ್ನೂ ಬಂಧಿಸದಿರುವುದು ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಮಾರೆಪ್ಪ ಆರೋಪಿಸಿದರು.
ಭೂಮಾನಂದ ಕೊಲೆ ಪ್ರಕರಣ ಸೇರಿದಂತೆ ಅಶ್ವಿನಿ ಹಾಗೂ ರಾಣೆಮ್ಮ ಅವರ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸಬೇಕು, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಪ್ರಕರಣಗಳ ವಿಚಾರಣೆಗೆ ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ರಾಯಚೂರು ಜಿಲ್ಲೆಯಲ್ಲಿ ದಲಿತ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಯಲು ಸರ್ಕಾರ ವಿಶೇಷ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು. ಪ್ರತಿಭಟನಾ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.
ಈ ಸಂದರ್ಭದಲ್ಲಿ ಮಾದಿಗ ಸಮಾಜದ ರಾಜ್ಯ ಮುಖಂಡ ಅಂಬಣ್ಣ ಅರೋಲಿಕರ್, ರವೀಂದ್ರನಾಥ ಪಟ್ಟಿ, ಎಂಆರ್‌ಎಸ್ಎಚ್ ರಾಜ್ಯಾಧ್ಯಕ್ಷ ಶಿವರಾಯ ಅಕ್ಕರಕಿ, ದಲಿತ ಸಂರ್ಘ ಸಮಿತಿ ಸಂಚಾಲಕ ಹನುಮಂತಪ್ಪ ಕಾಕರಗಲ್, ಹೇಮರಾಜ ಅಸ್ಥಿಹಾಳ, ಹಿರಿಯ ಬಹುಜನ ಚಿಂತಕ ಎಂ.ಆರ್.ಬೇರಿ, ಎಂಆರ್‌ಎಸ್‌ಎಚ್ ಜಿಲ್ಲಾಧ್ಯಕ್ಷ ಹನುಮಂತ ಮನ್ನಾಪುರಿ,ಜಾಕೋಬ್ ಬೊಮ್ಮನಾಳ, ಜಿಲ್ಲಾ ಚಲವಾದಿ ಮಹಿಳಾ ಘಟಕದ ಅಧ್ಯಕ್ಷೆ ಅರ್ಚನಾ ಸುಂಕಾರಿ, ಪಿ. ಯಲ್ಲಪ್ಪ, ಎಂ. ವಿರುಪಾಕ್ಷಿ, ನರಸಿಂಹಲು ಮಾಡಗಿರಿ, ವಿಶ್ವನಾಥ ಪಟ್ಟಿ, ಈರಣ್ಣ ಬಂಡಾರಿ, ವಿಜಯ ರಾಣಿ ಸೇರಿದಂತೆ ಇತರರು ಇದ್ದರು.






