ಬಾಣಂತಿಯರ ಸಾವು ಪ್ರಕರಣಗಳನ್ನು ಶೂನ್ಯಕ್ಕಿಳಿಸಲು ಕ್ರಮ: ಸಚಿವ ದಿನೇಶ್ ಗುಂಡೂರಾವ್
ಮಾತೃತ್ವ ಸುರಕ್ಷಾ ಅಭಿಯಾನಕ್ಕೆ ಚಾಲನೆ

ರಾಯಚೂರು: ಬಾಣಂತಿಯರ ಸಾವು ಪ್ರಕರಣಗಳನ್ನು ರಾಜ್ಯ ಸರ್ಕಾರವು ಗಂಭೀರವಾಗಿ ಪರಿಗಣಿಸಿದ್ದು, ಇನ್ನು ಮುಂದೆ ನಿಯಮಿತವಾಗಿ ಆರೋಗ್ಯ ತಪಾಸಣೆ, ಸಕಾಲಕ್ಕೆ ಚಿಕಿತ್ಸೆ ಮತ್ತು ಜಾಗೃತಿ ಅಭಿಯಾನ ಹಮ್ಮಿಕೊಳ್ಳುವ ಮೂಲಕ ತಾಯಂದಿರ ಮರಣ ಪ್ರಕರಣಗಳು ವರದಿಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಅವರು ಹೇಳಿದರು.
ನಗರದ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು, ವೈದ್ಯಕೀಯ ಮಹಾವಿದ್ಯಾಲಯ ಹಾಗೂ ನವೋದಯ ವೈದ್ಯಕೀಯ ಕಾಲೇಜು, ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ಜನವರಿ 22ರಂದು ನಡೆದ ಮಾತೃತ್ವ ಸುರಕ್ಷಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದ ವಿವಿಧೆಡೆ ಬಾಣಂತಿಯರ ಸಾವು ಪ್ರಕರಣಗಳು ವರದಿಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.
ಗರ್ಭಿಣಿಯರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಉತ್ತಮವಾಗಿರುವಂತೆ ಎಲ್ಲಾ ಕಡೆಗೆ ಕಡ್ಡಾಯವಾಗಿ ಅವರಿಗೆ ಗುಣಮಟ್ಟದ ಚಿಕಿತ್ಸೆ ದೊರೆತು, ತಾಯಂದಿರ ಅನಾರೋಗ್ಯ ಪ್ರಕರಣಗಳು ಸಂಪೂರ್ಣ ನಿಯಂತ್ರಣಕ್ಕೆ ಬಂದು ಶೂನ್ಯಕ್ಕೆ ತರುವ ರೀತಿಯಲ್ಲಿ ಜಾಗೃತಿ ಅಭಿಯಾನವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗುವುದು. ಕಲ್ಯಾಣ ಕರ್ನಾಟಕ ಭಾಗದ ರಾಯಚೂರ ಸೇರಿದಂತೆ ಎಲ್ಲಾ ಕಡೆಗೆ ಆದ್ಯತೆಯ ಮೇರೆಗೆ ಈ ಅಭಿಯಾನ ಜರುಗಿಸಲಾಗುವುದು ಎಂದು ಸಚಿವರು ತಿಳಿಸಿದರು.
ಜಿಲ್ಲಾ ಕೇಂದ್ರದಲ್ಲಿ ವೈದ್ಯಕೀಯ ಸೌಕರ್ಯ ಸಿಗುವ ರೀತಿಯಲ್ಲಿ ರಾಜ್ಯದ ಎಲ್ಲಾ ತಾಲೂಕುಗಳ ಆಸ್ಪತ್ರೆಗಳು ಸಹ ದಿನದ 24 ಗಂಟೆ ಕಾರ್ಯ ನಿರ್ವಹಿಸಿ ಜನತೆಗೆ ಉತ್ತಮ ಸೇವೆ ನೀಡಬೇಕು. ಗ್ರಾಮೀಣ ಭಾಗದ ಜನತೆಗೆ ಸಹ ಉತ್ತಮ ವೈದ್ಯಕೀಯ ಸೌಕರ್ಯ ಸಿಗುವ ನಿಟ್ಟಿನಲ್ಲಿ ಪ್ರಾಥಮಿಕ ಹಾಗೂ ಸಮುದಾಯ ಮತ್ತು ತಾಲೂಕು ಆಸ್ಪತ್ರೆಗಳನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ಮಾನ್ಯ ಮುಖ್ಯಮಂತ್ರಿಯವರ ಬಳಿ ಚರ್ಚಿಸಲಾಗುವುದು ಎಂದು ಸಚಿವರು ತಿಳಿಸಿದರು.
ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ಮಾಡುವ ಪ್ರಯತ್ನದ ಭಾಗವಾಗಿ ಮುಂಬರುವ ದಿನಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗುವುದು. ಆರೋಗ್ಯ ಇಲಾಖೆಯ ಕಾರ್ಯಗಳಿಗೆ ಕೈಜೋಡಿಸಿ ಕಾರ್ಯಪ್ರವೃತ್ತರಾದ ಆಶಾ ಕಾರ್ಯಕರ್ತೆಯರಿಗೆ ಎಪ್ರಿಲ್ ತಿಂಗಳಿನಿಂದ ಕನಿಷ್ಠ 10 ಸಾವಿರ ರೂ.ವೇತನ ನಿಗದಿ ಮಾಡಲಾಗುತ್ತದೆ ಎಂದರು.
ಕಲ್ಯಾಣ ಕರ್ನಾಟಕದ ಭಾಗದಲ್ಲಿನ ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಸುಧಾರಣೆ ತರಲಾಗುತ್ತದೆ. ಇದರನ್ವಯ ರಾಯಚೂರು ಜಿಲ್ಲೆಗೆ ಎಂಟು ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಮಾನ್ವಿ ತಾಲೂಕಿನಲ್ಲಿ ನಗರ ಆರೋಗ್ಯ ಕೇಂದ್ರ, ರಾಯಚೂರು ನಗರಕ್ಕೆ ಸಮುದಾಯ ಆರೋಗ್ಯ ಕೇಂದ್ರ ಅಲ್ಲದೇ ಜಿಲ್ಲೆಯ ಯಾವುದಾದರು ತಾಲೂಕಿನಲ್ಲಿ ಉಪವಿಭಾಗದ ಜಿಲ್ಲಾ ಆಸ್ಪತ್ರೆಯನ್ನು ಪ್ರಾರಂಭ ಮಾಡಲಾಗುತ್ತದೆ ಎಂದು ಸಚಿವರು ಹೇಳಿದರು.
ಗರ್ಭಿಣಿಯರಿಗೆ ಪ್ರಸವಪೂರ್ವ ತಪಾಸಣೆ ಓಬಿಜಿವೈ ತಜ್ಞ ವೈದ್ಯರಿಂದ ಗರ್ಭಿಣಿಯರಿಗೆ ಎರಡನೇ ಅಥವಾ ಮೂರನೇ ತ್ರೈಮಾಸಿಕದಲ್ಲಿ ಕನಿಷ್ಠ ಒಂದು ಪುಸವಪೂರ್ವ ತಪಾಸಣೆ ನಡೆಯಬೇಕು. ಪ್ರಸವಪೂರ್ವ ಸಮಯದಲ್ಲಿ ಆರೈಕೆಯ ಗುಣಮಟ್ಟ ಸುಧಾರಿಸಬೇಕು ಎಂದು ಸಚಿವರು ಸೂಚನೆ ನೀಡಿದರು.
ಈ ವೇಳೆ, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಅವರು ಮಾತನಾಡಿ, ರಾಯಚೂರ ಜಿಲ್ಲೆಗೆ ಸುಸಜ್ಜಿತ ಜಿಲ್ಲಾಸ್ಪತ್ರೆ ಅವಶ್ಯಕವಾಗಿದ್ದು, ತಕ್ಷಣ ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಹಿಂದುಳಿದ ಜಿಲ್ಲೆಯಾದ ರಾಯಚೂರಿನಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಇನ್ನು ಸುಧಾರಣೆಯಾಗಬೇಕಿದೆ. ಈ ಭಾಗದ ವೈದ್ಯರು ಮತ್ತು ಸಿಬ್ಬಂದಿಯು ಜನತೆಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುವ ಮೂಲಕ ಬಡ ಕುಟುಂಬಗಳಿಗೆ ಉತ್ತಮ ಸೇವೆ ನೀಡಬೇಕು ಎಂದು ಸಲಹೆ ಮಾಡಿದರು.
ಈ ಸಂದರ್ಭ ಮಾನ್ವಿ ವಿಧಾನಸಭೆ ಕ್ಷೇತ್ರದ ಶಾಸಕರಾದ ಜಿ.ಹಂಪಯ್ಯ ನಾಯಕ್, ರಾಯಚೂರು ಮಹಾನಗರ ಪಾಲಿಕೆಯ ಅಧ್ಯಕ್ಷರಾದ ನರಸಮ್ಮ ನರಸಿಂಹಲು ಮಾಡಗಿರಿ, ಮಹಾನಗರ ಪಾಲಿಕೆಯ ಉಪಾಧ್ಯಕ್ಷರಾದ ಸಜೀದ್ ಸಮೀರ, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು, ಆರ್.ಸಿ.ಹೆಚ್ ಅಧಿಕಾರಿ ಡಾ.ನಂದಿತಾ, ಆಯುಷ್ ಇಲಾಖೆಯ ಅಧಿಕಾರಿ ಡಾ.ಶಂಕರಗೌಡ ಎಸ್.ಪಾಟೀಲ್ ಸೇರಿದಂತೆ ಆರೋಗ್ಯ ಇಲಾಖೆಯ ವಿವಿಧ ವಿಭಾಗದ ಅಧಿಕಾರಿ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಇದ್ದರು.







