ಹಟ್ಟಿ | ಕಾರ್ಮಿಕರ ಹಕ್ಕು, ಶಕ್ತಿಯ ದಿನವೇ ಮೇ ದಿನ : ರಮೇಶ ವೀರಾಪೂರು
ಸಿಐಟಿಯು ನೇತೃತ್ವದಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆ

ಹಟ್ಟಿ: ‘ಮೇ ದಿನ ಜಗತ್ತಿನ ಅತ್ಯಂತ ದೊಡ್ಡ ಶಕ್ತಿಯಾದ ದುಡಿಯುವ ಜನರ ದಿನವಾಗಿದ್ದು, ಕಾರ್ಮಿಕ ವರ್ಗಕ್ಕೆ ಹಕ್ಕು, ಶಕ್ತಿ ತುಂಬಿದ ದಿನವಾಗಿದೆ ಎಂದು ಸಿಪಿಎಂ ತಾಲೂಕು ಕಾರ್ಯದರ್ಶಿ ರಮೇಶ ವೀರಾಪೂರು ಹೇಳಿದರು.
ಸಿಐಟಿಯು ಲಿಂಗಸ್ಗೂರು ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಗುರುವಾರದಂದು ನಡೆದ ಮೇ ದಿನಾಚರಣೆಯ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಾರ್ಮಿಕ ವರ್ಗದ ಹಕ್ಕು ಮತ್ತು ಸವಲತ್ತುಗಳನ್ನು ಕೇಂದ್ರದ ಬಿಜೆಪಿ ಸರ್ಕಾರ ಕಿತ್ತೆಸೆಯುತ್ತಾ ಬರುತ್ತಿದ್ದು, ಇದು ಖಂಡನೀಯ ಎಂದರು.
ಕಾರ್ಪೊರೇಟ್ ಕಂಪನಿಗಳ, ಕಾರ್ಮಿಕ ವರ್ಗ, ರೈತರ ವಿರೋಧಿ ಸರ್ಕಾರದ ವಿರುದ್ಧ ಹೋರಾಟಗಳು ನಡೆಯಬೇಕಾಗಿದೆ. ನರೇಂದ್ರ ಮೋದಿ ಸರ್ಕಾರ ಜನರನ್ನು ಮೌಢ್ಯದಲ್ಲಿ ಮುಳುಗಿಸಿ ಬಂಡವಾಳದಾರರ ಹಿತ ಕಾಪಾಡುಡುತ್ತಿದೆ. ಇಂತಹವರ ವಿರುದ್ಧ ಹೋರಾಡಲು ಮೇ ದಿನ ಸ್ಫೂರ್ತಿಯಾಗಲಿ’ ಎಂದರು.
ಪಟ್ಟಣದ ಸಿಐಟಿಯು ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಅಲ್ಲಿಂದ ಹೊರಟ ಮೆರವಣಿಗೆ ಹಟ್ಟಿ ಕ್ಯಾಂಪ್ ನ ಹಳೆ ಬಸ್ ನಿಲ್ದಾಣ ತಲುಪಿತು. ಮೆರವಣಿಗೆಯುದ್ದಕ್ಕೂ ವಿಶ್ವ ಕಾರ್ಮಿಕರೇ ಒಂದಾಗಿ ಹೋರಾಟಕ್ಕೆ ಮುಂದಾಗಿ, ಕಾರ್ಮಿಕರ ಐಕ್ಯತೆ ಚಿರಾಯುವಾಗಲಿ ಸೇರಿದಂತೆ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಸಿಐಟಿಯು ಮುಖಂಡರಾದ ಹನೀಫ್, ಅಂಗನವಾಡಿ ಸಂಘಟನೆ ತಾಲೂಕಾಧ್ಯಕ್ಷೆ ಸರಸ್ವತಿ ಈಚನಾಳ, ಬಿಸಿಯೂಟ ನೌಕರರ ಈ.ಫಕ್ರುದ್ದೀನ್, ವೆಂಕಟೇಶ ಗೋರಕಲ್, ನಿಂಗಪ್ಪ ಎಂ., ನಾಗಯ್ಯಸ್ವಾಮಿ, ರಫಿ, ಅಲ್ಲಾಭಕ್ಷ, ಖಾಜಾ ಮೈನುದ್ದೀನ್, ಮಹಾಂತೇಶ ಬುದ್ದಿನ್ನಿ, ಪಾಲ್ ಸನ್, ಚೆನ್ನಬಸವ ವಂದ್ಲಿ ಹೊಸೂರು, ಪಯಾಜ್, ಶ್ರೀದರ್, ರಾಮಮೂರ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.







