Raichur | ಅ.25ರಿಂದ ನ.4ರವರೆಗೆ ಗಣೇಕಲ್ ಜಲಾಶಯಕ್ಕೆ ನೀರು ತುಂಬಿಸಲು ಕ್ರಮ: ಡಿಸಿ ಪೂವಿತಾ ಎಸ್.

ರಾಯಚೂರು: ಜಿಲ್ಲೆಯ ಗಣೇಕಲ್ ಸಮತೋಲನ ಜಲಾಶಯವನ್ನು ತುಂಬಿಸುವ ಉದ್ದೇಶದಿಂದ ಅ.25ರ ಬೆಳಗ್ಗೆ 8ರಿಂದ ನ.4ರ ಬೆಳಗ್ಗೆ 8ರವರೆಗೆ ಹಂತ ಹಂತವಾಗಿ ಮೂರು ದಿನಗಳ ಅವಧಿಗೆ ದೊಡ್ಡ ವಿತರಣಾ ಕಾಲುವೆಗಳಲ್ಲಿ ನೀರಿನ ಹರಿವನ್ನು ಅರ್ಧದಷ್ಟು ಕಡಿತಗೊಳಿಸಿ, ಉಳಿದ ವಿತರಣಾ ಕಾಲುವೆಗಳನ್ನು ಸಂಪೂರ್ಣ ಬಂದ್ ಮಾಡುವ ಮೂಲಕ ಕೆರೆ ತುಂಬಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪೂವಿತಾ ಎಸ್. ತಿಳಿಸಿದರು.
ಅ.25ರಂದು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಂಗಭದ್ರಾ ಜಲಾಶಯದಲ್ಲಿನ ಪ್ರಸ್ತುತ ನೀರಿನ ಲಭ್ಯತೆಗೆ ಅನುಗುಣವಾಗಿ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ ಮೈಲ್ 108ರಲ್ಲಿರುವ ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರತಿ ವಿಭಾಗದಲ್ಲಿ ಸುಮಾರು 200 ಕ್ಯೂಸೆಕ್ ನೀರನ್ನು ಹೆಚ್ಚಿಸಿ ಗಣೇಕಲ್ ಕೆರೆಗೆ ನೀರು ಹರಿಸಲಾಗುತ್ತದೆ. ಗಣೇಕಲ್ ಭಾಗದ ರೈತರಿಗೆ ನೀರಾವರಿಗಾಗಿ ಒಂದು ರೊಟೇಶನ್‌ನಲ್ಲಿ ನೀರು ಒದಗಿಸಲಾಗುವುದು ಎಂದರು.
ಕುಡಿಯುವ ನೀರಿನ ಉದ್ದೇಶಕ್ಕಾಗಿ ಎಲ್ಲ ಕೆರೆಗಳನ್ನು ತುಂಬಿಸಿದ ಬಳಿಕ ಜಲಾಶಯದಲ್ಲಿ ಸುಮಾರು 15ರಿಂದ 16 ಅಡಿ ನೀರು ಉಳಿಯುವ ನಿರೀಕ್ಷೆಯಿದೆ. ಈ ನೀರು ಮುಂದಿನ ಡಿಸೆಂಬರ್‌ನಲ್ಲಿ ಕುಡಿಯುವ ನೀರು ಪೂರೈಸಲು ಸಾಕಾಗಲಿದೆ ಎಂದು ತಿಳಿಸಿದರು.
ಗಣೇಕಲ್ ಕೆರೆ ತುಂಬಿದ ಬಳಿಕ ಸಿಂಧನೂರು, ಮಸ್ಕಿ, ಮಾನ್ವಿ ಹಾಗೂ ಅರಕೆರೆ ಭಾಗಗಳಲ್ಲಿನ ಕುಡಿಯುವ ನೀರಿನ ಕೆರೆಗಳನ್ನು ಗರಿಷ್ಠ 13ರಿಂದ 14 ಅಡಿ ಮಟ್ಟದವರೆಗೆ ತುಂಬಿಸಬೇಕಾಗುತ್ತದೆ. ಕೊನೆಯ ಐದರಿಂದ ಆರು ದಿನಗಳಲ್ಲಿ ನೀರಾವರಿಗೆ ಹರಿಸುವ ನೀರಿನ ಪ್ರಮಾಣವನ್ನು ನಿಯಂತ್ರಿಸಿ, ಮಧ್ಯದಲ್ಲಿ ನೀರು ಪಡೆಯುತ್ತಿರುವವರ ಕ್ಯೂಸೆಕ್ ಪ್ರಮಾಣವನ್ನೂ ಕಡಿತಗೊಳಿಸುವ ಮೂಲಕ ನೀರನ್ನು ಸಮರ್ಪಕವಾಗಿ ಹಂಚಿಕೆ ಮಾಡಲಾಗುವುದು ಎಂದರು.
ಈ ಹಿಂದೆ 4,200ರಿಂದ 4,100 ಕ್ಯೂಸೆಕ್‌ವರೆಗೆ ನೀರು ಹರಿಸಲಾಗುತ್ತಿತ್ತು. ಇದೀಗ ಅದನ್ನು 3,800 ಕ್ಯೂಸೆಕ್‌ಗೆ ಇಳಿಸಲಾಗಿದೆ. ಕುಡಿಯುವ ನೀರಿನ ಕೆರೆಗಳನ್ನೂ ಸಮಾನಾಂತರವಾಗಿ ತುಂಬಿಸಲಾಗುತ್ತಿರುವುದರಿಂದ ನೀರಾವರಿಗೆ ಲಭ್ಯವಾಗುವ ನೀರಿನ ಪ್ರಮಾಣ ಸ್ವಲ್ಪ ಕಡಿಮೆಯಾಗಲಿದೆ. ಸಾಧ್ಯವಾದಷ್ಟು ಮಟ್ಟಿಗೆ ಅಪ್ಪರ್ ಮತ್ತು ಇಂಟರ್ನಲ್ ಡಿಸ್ಟ್ರಿಬ್ಯೂಟರಿಗಳು ಹಾಗೂ ಲೋಯರ್ ರೊಟೇಶನ್‌ಗೂ ನೀರು ಒದಗಿಸುವ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದೆ. ಕಾಲುವೆಗಳಿಗೆ ನೀರು ಹರಿಸುವುದರ ಮೇಲೆ ಸಂಪೂರ್ಣ ನಿಯಂತ್ರಣ ಜಾರಿಗೊಳಿಸಲಾಗುವುದು ಎಂದು ಹೇಳಿದರು.
ರೈತರ ಸಹಕಾರಕ್ಕೆ ಮನವಿ :
ಜಿಲ್ಲೆಯ ರೈತರು, ಮುಖಂಡರು ಹಾಗೂ ಜನಪ್ರತಿನಿಧಿಗಳು ಐಸಿಸಿ ಸಭೆಯಲ್ಲಿ ಭಾಗವಹಿಸಿದ್ದು, ಎಲ್ಲರೂ ಸಹಕಾರ ನೀಡಬೇಕು. ಕುಡಿಯುವ ನೀರಿನ ವಿಚಾರದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಸಮಸ್ಯೆ ಎದುರಾಗುವ ಸಾಧ್ಯತೆಯಿರುವುದರಿಂದ ರಸ್ತೆ ತಡೆ ಅಥವಾ ಇತರ ಪ್ರತಿಭಟನೆಗಳನ್ನು ನಡೆಸದೆ, ಅಧಿಕಾರಿಗಳೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳು ಉಪಸ್ಥಿತರಿದ್ದರು.






