ಕಲ್ಯಾಣ ಕರ್ನಾಟಕಕ್ಕೆ ಕೇಂದ್ರದಿಂದ 5 ಸಾವಿರ ಕೋಟಿ ರೂ. ನೀಡಲಿ : ಸಚಿವ ಡಾ.ಅಜಯ್ ಧರಂಸಿಂಗ್

ರಾಯಚೂರು : ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ರಾಜ್ಯ ಸರಕಾರ 5 ಸಾವಿರ ಕೋಟಿ ರೂ. ಅನುದಾನ ನೀಡುತ್ತಿದ್ದು, ಕೇಂದ್ರ ಸರಕಾರವೂ ಇದೇ ಪ್ರಮಾಣದ ಅನುದಾನ ನೀಡಬೇಕು ಎಂದು ಸಚಿವ ಡಾ.ಅಜಯ್ ಧರಂಸಿಂಗ್ ಆಗ್ರಹಿಸಿದರು.
ಕರ್ನಾಟಕದ ಬಜೆಟ್ ಸುಮಾರು 4.48 ಲಕ್ಷ ಕೋಟಿ ರೂ. ಇದ್ದು, ಅದರಲ್ಲಿ ಕಲ್ಯಾಣ ಕರ್ನಾಟಕಕ್ಕೆ 5 ಸಾವಿರ ಕೋಟಿ ರೂ. ಮೀಸಲಿಡಲಾಗುತ್ತಿದೆ. ಕೇಂದ್ರ ಸರಕಾರದ ಬಜೆಟ್ ಸುಮಾರು 52 ಲಕ್ಷ ಕೋಟಿ ರೂ. ಇದೆ. ಹೀಗಾಗಿ ಕೇಂದ್ರ ಸರಕಾರವೂ ಕಲ್ಯಾಣ ಕರ್ನಾಟಕಕ್ಕೆ 5 ಸಾವಿರ ಕೋಟಿ ರೂ. ನೀಡಿದರೆ ಒಟ್ಟು 10 ಸಾವಿರ ಕೋಟಿ ರೂ. ಅನುದಾನ ದೊರೆಯಲಿದ್ದು, ಈ ಭಾಗದ ಅಭಿವೃದ್ಧಿಗೆ ಇನ್ನಷ್ಟು ವೇಗ ಸಿಗಲಿದೆ ಎಂದರು.
“ಮೋದಿಯವರ ಕೊಡುಗೆ ಏನು?” ಎಂದು ಪ್ರಶ್ನಿಸಿದ ಅವರು, ಕಳೆದ 12–13 ವರ್ಷಗಳಿಂದ ನರೇಂದ್ರ ಮೋದಿ ಅವರು ಅಧಿಕಾರದಲ್ಲಿದ್ದಾರೆ. 2014ರಲ್ಲಿ ಕರ್ನಾಟಕದಿಂದ 17 ಸಂಸದರು ಆಯ್ಕೆಯಾಗಿದ್ದರು. 2019ರಲ್ಲಿ 26 ಎನ್‌ಡಿಎ ಸಂಸದರು ಆಯ್ಕೆಯಾಗಿದ್ದರು. ಈಗಲೂ 19 ಸಂಸದರು ಇದ್ದಾರೆ. ಆದರೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಕೇಂದ್ರದಿಂದ ಹೆಚ್ಚಿನ ಅನುದಾನ ತರುವ ಕುರಿತು ಯಾರೂ ಧ್ವನಿ ಎತ್ತುತ್ತಿಲ್ಲ ಎಂದು ಟೀಕಿಸಿದರು.
ಬಿಜೆಪಿ ನಾಯಕರ ಬಳಿ ಯಾವುದೇ ದಾಖಲೆಗಳಿಲ್ಲ :
ಕೆಪಿಎಸ್‌ಸಿ ನೇಮಕಾತಿ ಹಗರಣದ ವಿಚಾರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು ಎಂಬ ಬಿಜೆಪಿ ನಾಯಕರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಅಜಯ್ ಧರಂಸಿಂಗ್, ಬಿಜೆಪಿ ನಾಯಕರ ಬಳಿ ಯಾವುದೇ ದಾಖಲೆಗಳಿಲ್ಲ ಎಂದು ಹೇಳಿದರು.
ಬಿಜೆಪಿ ನಾಯಕರು ಕಳೆದ ಒಂದು ತಿಂಗಳು, 15 ದಿನಗಳಿಂದ ಈ ಕುರಿತು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ಇದುವರೆಗೆ ಯಾವುದೇ ದಾಖಲೆಗಳನ್ನು ಬಹಿರಂಗಪಡಿಸಿಲ್ಲ. ಪ್ರಿಯಾಂಕ್ ಖರ್ಗೆ ಅವರು ತಮ್ಮ ನಿಲುವಿನ ಬಗ್ಗೆ ಸ್ಪಷ್ಟನೆಯನ್ನೂ ನೀಡಿದ್ದಾರೆ. ಕೇವಲ ಪ್ರಚಾರಕ್ಕಾಗಿ ಆರೋಪ ಮಾಡಲಾಗುತ್ತಿದೆ ಎಂದು ಹೇಳಿದರು.
ಹಿಂದೆ ಕುಮಾರಸ್ವಾಮಿ ಅವರೂ ತಮ್ಮ ಬಳಿ ಸಿಡಿ ಹಾಗೂ ಪೆನ್‌ಡ್ರೈವ್ ಇದೆ ಎಂದು ಹೇಳಿದ್ದರು. ಆದರೆ ಯಾವುದೇ ಸಿಡಿ ಅಥವಾ ಪೆನ್‌ಡ್ರೈವ್ ಹೊರಬರಲಿಲ್ಲ. ಈಗ ಆರೋಪ ಮಾಡುತ್ತಿರುವವರೇ “ಹಿಟ್ ವಿಕೆಟ್” ಆಗುತ್ತಿದ್ದಾರೆ ಎಂದು ಹೇಳಿದರು.
ಈ ವೇಳೆ ಮಾಜಿ ಸಚಿವ ಎನ್.ಎಸ್.ಬೋಸರಾಜು, ವಿಧಾನ ಪರಿಷತ್ ಎ ವಸಂತ ಕುಮಾರ, ಕಾಂಗ್ರೆಸ್ ಮುಖಂಡ ಮುಹಮ್ಮದ್ ಶಾಲಂ ಮತ್ತಿತರರು ಇದ್ದರು.






