ರಾಯಚೂರು ಮಹಾನಗರ ಪಾಲಿಕೆಯಿಂದ ಎಲ್ಇಡಿ ಬೀದಿದೀಪ ಅಳವಡಿಕೆ ಕಾರ್ಯಕ್ರಮಕ್ಕೆ ಸಚಿವರು, ಮಹಾಪೌರರಿಂದ ಚಾಲನೆ

ರಾಯಚೂರು: ರಾಯಚೂರು ಮಹಾನಗರ ಪಾಲಿಕೆಯಿಂದ ಎಲ್ಇಡಿ ಬೀದಿದೀಪಗಳನ್ನು ಅಳವಡಿಸುವ ಕಾರ್ಯಕ್ರಮಕ್ಕೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಹಾಗೂ ರಾಯಚೂರು ಮಹಾನಗರ ಪಾಲಿಕೆಯ ಮಹಾ ಪೌರರಾದ ನರಸಮ್ಮ ನರಸಿಂಹಲು ಮಾಡಿಗಿರಿ ಅವರು ಜಂಟಿಯಾಗಿ ಚಾಲನೆ ನೀಡಿದರು.
ಆ.27ರ ಬುಧವಾರ ನಗರದ ಹಳೆಯ ನಗರಸಭೆ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪಾಲಿಕೆಯ ಎಲ್ಲ ಸದಸ್ಯರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಬೀದಿ ದೀಪ ಅಳವಡಿಕೆಗೆ ತಂದಿದ್ದ ಬಾಕ್ಸ್‌ಗಳನ್ನು ತೆರೆದು, ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದಂತೆ ಎಲ್ಲರೂ ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.
ಈ ವೇಳೆ ಸಚಿವರು ಮಾತನಾಡಿ, ರಾಯಚೂರಿನ ಮುಖ್ಯ ರಸ್ತೆಗಳಲ್ಲಿ ಪಾಲಿಕೆಯಿಂದ ಗುಣಮಟ್ಟದ ಲೈಟಿಂಗ್ ವ್ಯವಸ್ಥೆ ಮಾಡುತ್ತಿದ್ದು, ಇದು ನಗರದ ಸೌಂದರ್ಯ ಹೆಚ್ಚಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ರಾಯಚೂರು ಮಹಾನಗರ ಪಾಲಿಕೆಯಿಂದ 150 ವೋಲ್ಟೇಜ್‌ನ 605 ಎಲ್ಇಡಿ ಲೈಟ್ ಗಳಿಗೆ ಸುಮಾರು 80-90 ಲಕ್ಷ ರೂ. ಗಳನ್ನು ಖರ್ಚು ಮಾಡಿ ಲೈಟಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕಾಗಿ ಒಂದು ಸಮಿತಿ ರಚಿಸಿ ಉತ್ತಮ ನಿರ್ವಹಣೆಗೆ ಜವಾಬ್ದಾರಿ ನೀಡಬೇಕು ಎಂದು ಸಚಿವರು ತಿಳಿಸಿದರು.
ಪಾಲಿಕೆಯ ವ್ಯಾಪ್ತಿಯಲ್ಲಿ ಲೈಟಿಂಗ್ ಸಮಸ್ಯೆ ಇರುವ ಕಡೆಗಳಲ್ಲಿ ಇನ್ನು ಮುಂದೆ ಈ ಲೈಟ್ ವ್ಯವಸ್ಥೆಯಾಗಿ ಜನತೆಗೆ ಅನುಕೂಲವಾಗಲಿದೆ. ಪಾಲಿಕೆಯು ಜನತೆಗೆ ಸ್ಪಂದಿಸುವ ಉತ್ತಮ ಕಾರ್ಯ ಮಾಡಿದೆ ಎಂದು ತಿಳಿಸಿದರು.
ಅಸ್ಕಿಹಾಳನಿಂದ ರಿಂಗ್ ರೋಡವರೆಗೂ ರಸ್ತೆ ಹದಗೆಟ್ಟಿದ್ದು, ಪಾಲಿಕೆ ಹಾಗೂ ಕೆಕೆಆರ್‌ಡಿಬಿಯಿಂದ ಸರಿಪಡಿಸಲು ಯೋಜಿಸಬೇಕು ಎಂದು ಸಚಿವರು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಸದಸ್ಯರಾದ ಜಯಣ್ಣ, ಜಿಂದಪ್ಪ, ಶಶಿಧರ್, ಸಣ್ಣ ನರಸರೆಡ್ಡಿ, ಬಸವರಾಜ ಪಾಟೀಲ್, ತಿಮ್ಮಪ್ಪ ಮುಖಂಡರಾದ ನರಸಿಂಹಲು ಮಾಡಗಿರಿ, ಕೆ.ಶಾಂತಪ್ಪ, ಶಿವಮೂರ್ತಿ, ಶಾಲಂ ಪಾಷ, ಅಲಿಬಾಬು ಸೇರಿದಂತೆ ಇನ್ನೀತರ ಗಣ್ಯರು, ಪಾಲಿಕೆಯ ವಿವಿಧ ವಿಭಾಗಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.







