ರಸಗೊಬ್ಬರದ ಮಾರಾಟ ದರ ಹೆಚ್ಚಿಸಿದರೆ ಕ್ರಮ: ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ ಎಚ್ಚರಿಕೆ
ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆ

ರಾಯಚೂರು: ಜಿಲ್ಲೆಯಲ್ಲಿ ಹಾಗೂ ಲಿಂಗಸುಗೂರು ತಾಲೂಕಿನಲ್ಲಿ ರಸಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳಬೇಕು. ರೈತರಿಗೆ ಹಚ್ಚಿನ ದರದಲ್ಲಿ ರಸಗೊಬ್ಬರ ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂತವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ ಆರ್. ಪಾಟೀಲ ಅವರು ಹೇಳಿದರು.
ಜುಲೈ 27ರ ರವಿವಾರ ದಂದು ಜಿಲ್ಲೆಯ ಲಿಂಗಸುಗೂರು ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಲಿಂಗಸುಗೂರು ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಸಿ ಅವರು ಮಾತನಾಡಿದರು.
ಲಿಂಗಸೂರ್ ತಾಲೂಕಿನಲ್ಲಿ ಶೇಕಡ 90ರಷ್ಟು ಬಿತ್ತನೆ ಕಾರ್ಯ ಆಗಿದ್ದು, ರೈತರಿಗೆ ಸರಿಯಾಗಿ ರಸಗೊಬ್ಬರ ಪೂರೈಕೆ ಮಾಡಬೇಕು. ಕೊರತೆ ಇರುವ ಕಡೆಗೆ, ಬೇರೆ ಕಡೆಯಿಂದ ಪಡೆದು ರೈತರಿಗೆ ತಲುಪಿಸಬೇಕು. ಎಲ್ಲ ಅಂಗಡಿಗಳಲ್ಲಿ ಗೊಬ್ಬರಗಳ ದರಪಟ್ಟಿಯನ್ನು ಪ್ರದರ್ಶನ ಮಾಡಬೇಕು. ಪ್ರದರ್ಶನ ಮಾಡದಿದ್ದಲ್ಲಿ ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಲಿಂಗಸ್ಗೂರು ತಾಲೂಕಿನ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯರು ನಿಗದಿತ ಸಮಯಕ್ಕೆ ಹಾಜರಾಗಬೇಕು. ಒಂದು ವೇಳೆ ಹಾಜರಾಗದಿದ್ದರೆ ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಖಾಲಿ ಇರುವ ವೈದ್ಯರ ಹುದ್ದೆಗಳನ್ನು ಎನ್ಎಂಎಚ್ ಕಾರ್ಯಕ್ರಮದಲ್ಲಿ ನೇಮಕಾತಿ ಮಾಡಿ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೌಲಭ್ಯಗಳು ಒದಗಿಸಬೇಕೆಂದರು.
ಜಿಲ್ಲೆಯಲ್ಲಿ ಎಸ್ಸೆಸೆಲ್ಸಿ ಫಲಿತಾಂಶ ಸುಧಾರಣೆಯಾಗಬೇಕು. ಆಯಾ ತಾಲೂಕಿನಲ್ಲಿನ ಶಿಕ್ಷಕರ ಕೊರತೆ ನೀಗಿಸಲು ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಬೇಕು. ಉತ್ತಮ ಗುಣಮಟ್ಟ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಬೇಕು. ಈ ಬಾರಿ ಎಸ್ಸೆಸೆಲ್ಸಿಯಲ್ಲಿ ಕನಿಷ್ಠ ಶೇ.85ರಷ್ಟು ಫಲಿತಾಂಶವನ್ನು ಪಡೆಯಬೇಕು. ಇದಕ್ಕಾಗಿ ಜಿಲ್ಲಾಧಿಕಾರಿಗಳು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಕಾಲಕಾಲಕ್ಕೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಿರ್ದೇಶನಗಳನ್ನು ನೀಡಬೇಕೆಂದರು.
ಜೆಜೆಎಂ ಕಾಮಗಾರಿ ಕುರಿತು ಸಿಇಓ ಅವರು ಪ್ರತಿ ತಾಲೂಕಿನಲ್ಲಿ ಸಭೆ ನಡೆಸಿ ಕಾಮಗಾರಿಗಳ ಕುರಿತು ಮುತುವರ್ಜಿ ವಹಿಸಬೇಕು. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಅನುದಾನವು ಯಾವುದೇ ಕಾರಣಕ್ಕೂ ವಾಪಾಸು ಹೋಗದಂತೆ ನೋಡಿಕೊಳ್ಳಬೇಕು. ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಮುಗಿಸಬೇಕು. ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಅಡುಗೆ ಸಹಾಯಕರ ಹಾಗೂ ಕಾರ್ಯಕರ್ತರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಿ ಮಕ್ಕಳ ಶ್ರೇಯಸ್ಸಿಗೆ ಶ್ರಮಿಸಬೇಕು.
ಎಲ್ಲ ವಸತಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳೊಂದಿಗೆ ಅಲ್ಲಿನ ಮಕ್ಕಳಿಗೆ ಉತ್ತಮ ಗುಣಮಟ್ಟ ಶಿಕ್ಷಣ ನೀಡಬೇಕು ಎಂದ ಸಚಿವರು, ವಸತಿ ನಿಲಯಗಳ ಹೊಸ ಕಟ್ಟಡಕ್ಕಾಗಿ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರೈತರು ಹೆಚ್ಚಿನ ಮಟ್ಟದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಜಾಗೃತಿ ಮೂಡಿಸಬೇಕು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಸೌಲಭ್ಯಗಳು ಕುರಿತು ಅವರಿಗೆ ಮನವರಿಕೆ ಮಾಡಬೇಕು ಎಂದು ಸಚಿವರು ತಿಳಿಸಿದರು.
ಸಚಿವರಿಂದ ಅಕ್ಕ ಕೆಫೆ ಉದ್ಘಾಟನೆ: ಇದಕ್ಕೂ ಮೊದಲು ಲಿಂಗಸುಗೂರು ಪಟ್ಟಣದ ತಾಲೂಕು ಪಂಚಾಯತ್ ಆವರಣದಲ್ಲಿ ಜುಲೈ 27ರ ಭಾನುವಾರ ದಂದು ಸಂಜೀವಿನಿ -ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಪಂಚಾಯತ ರಾಯಚೂರು, ತಾಲೂಕಾ ಪಂಚಾಯತ್ ಲಿಂಗಸುಗೂರು ಇವರ ಸಂಯುಕ್ತಾಶ್ರಯದಲ್ಲಿ ಅಕ್ಕ ಕೆಫೆಯನ್ನು ಇದೆ ವೇಳೆ, ಸಚಿವರು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನಪ್ಪ ಡಿ.ವಜ್ಜಲ್, ವಿಧಾನ ಪರಿಷತ್ ಶಾಸಕರಾದ ಎ.ವಸಂತಕುಮಾರ, ಶರಣಗೌಡ ಬಯ್ಯಾಪೂರ, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪುಟ್ಟಮಾದಯ್ಯ ಎಂ., ಜಿಲ್ಲಾ ಪಂಚಾಯತ್ ಸಿಇಓ ಈಶ್ವರ ಕುಮಾರ ಕಾಂದೂ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶರಣಬಸವರಾಜ, ಸಿಪಿಓ ಡಾ.ಟಿ.ರೋಣಿ ಸೇರಿದಂತೆ ತಹಸೀಲ್ದಾರರು ಹಾಗೂ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಇನ್ನೀತರ ಇಲಾಖೆಗಳ ಅಧಿಕಾರಿಗಳು ಇದ್ದರು.







