ಪ್ಲಾಸ್ಟಿಕ್ ಬಾಟಲಿಗಳಿಂದ ನಿರ್ಮಿಸಿದ ಆನೆ ಕಲಾಕೃತಿ ಅನಾವರಣಗೊಳಿಸಿದ ಸಚಿವ ಯತೀಂದ್ರ ಸಿದ್ದರಾಮಯ್ಯ

ರಾಯಚೂರು : ರಾಜ್ಯದ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ರಾಯಚೂರು ಮಹಾನಗರ ಪಾಲಿಕೆ ವತಿಯಿಂದ ಪ್ಲಾಸ್ಟಿಕ್ ಬಾಟಲಿಗಳ ಮರುಬಳಕೆಯಿಂದ ನಿರ್ಮಿಸಲಾದ ಆನೆ ಕಲಾಕೃತಿಯನ್ನು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಉದ್ಘಾಟಿಸಿದರು.
ಬಳಿಕ ‘ನಿಮ್ಮ ಬಾಗಿಲಿಗೆ ಮಹಾನಗರ ಪಾಲಿಕೆ ಕಂದಾಯ ಅದಾಲತ್ – ಹಂತ-2’ ಕಾರ್ಯಕ್ರಮಕ್ಕೆ ಡಿಜಿಟಲ್ ಮೂಲಕ ಚಾಲನೆ ನೀಡಿ, ಫಲಾನುಭವಿಗಳಿಗೆ ಇ-ಖಾತಾ ದಾಖಲೆಗಳನ್ನು ವಿತರಿಸಿದರು. ಇದೇ ವೇಳೆ ಪೌರ ಕಾರ್ಮಿಕರಿಗೆ ಕಿಟ್‌ಗಳು ಹಾಗೂ ಮಹಾನಗರ ಪಾಲಿಕೆ ಚಾಲಕರಿಗೆ ಸಮವಸ್ತ್ರಗಳನ್ನು ಸಾಂಕೇತಿಕವಾಗಿ ವಿತರಿಸಿದರು.
ಅನಂತರ ರಾಯಚೂರು ಮಹಾನಗರ ಪಾಲಿಕೆ ಹಾಗೂ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ನಗರಾಭಿವೃದ್ಧಿಗೆ ಸಂಬಂಧಿಸಿದ ವಿವಿಧ ಕಾಮಗಾರಿಗಳ ಪ್ರಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ನಗರದ ಮೂಲಸೌಕರ್ಯ ಅಭಿವೃದ್ಧಿ, ವಿವಿಧ ಯೋಜನೆಗಳ ಅನುಷ್ಠಾನ ಹಾಗೂ ಬಾಕಿ ಉಳಿದಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು.
ಪರಿಸರ ಜಾಗೃತಿಗೆ ವಿನೂತನ ಪ್ರಯತ್ನ :
ನಗರದ ಸ್ವಚ್ಛತೆ, ಪ್ಲಾಸ್ಟಿಕ್ ತ್ಯಾಜ್ಯದ ಮರುಬಳಕೆ ಹಾಗೂ ಪರಿಸರ ಸಂರಕ್ಷಣೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ಲಾಸ್ಟಿಕ್ ಬಾಟಲಿಗಳಿಂದ ನಿರ್ಮಿಸಲಾದ ಆನೆ ಕಲಾಕೃತಿ ಮಹತ್ವದ ಸಂದೇಶ ಸಾರಲಿದೆ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಬಸನಗೌಡ ದದ್ದಲ್, ವಿಧಾನ ಪರಿಷತ್ ಸದಸ್ಯರಾದ ಎನ್.ಎಸ್. ಬೋಸರಾಜು ಹಾಗೂ ವಸಂತಕುಮಾರ, ಆರ್‌ಡಿಎ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಜಿಲ್ಲಾಧಿಕಾರಿ ಪೂವಿತಾ ಎಸ್., ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೋಹಪಾತ್ರ ಸೇರಿದಂತೆ ಪಾಲಿಕೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.






