ಹಿಂದಿ ಹೇರಿಕೆಯಿಂದ ಸಣ್ಣ ಭಾಷೆಗಳು ಕರಗಿ ಹೋಗುತ್ತಿವೆ : ರಹಮತ್ ತರೀಕೆರೆ

ಸಿಂಧನೂರು, ಮೇ 18 : ಹಿಂದಿ ಭಾಷೆಯ ದೇಶೀಯ ವಸಾಹತುಶಾಹಿ-ಸಾಮ್ರಾಜ್ಯಶಾಹಿ ಗುಣದಿಂದ ಉತ್ತರ ಭಾರತದಲ್ಲಿ 18 ಸಣ್ಣ ಭಾಷೆಗಳು ಕರಗಿ ಹೋಗುತ್ತಿವೆ. ಇದು ಸಂಯುಕ್ತ ರಾಷ್ಟ್ರದ ಸಮಸ್ಯಾತ್ಮಕ ಸಂಗತಿಯೂ ಆಗಿದೆ. ಕರ್ನಾಟಕದಲ್ಲಿ ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಹಿಂದಿ ವಿಷಯದಲ್ಲಿ 1 ಲಕ್ಷ ಆಸುಪಾಸು ವಿದ್ಯಾರ್ಥಿಗಳು ಅನುತ್ತೀರ್ನರಾಗಿದ್ದಾರೆ ಎಂದು ಹಂಪಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ರಹಮತ್ ತರೀಕೆರೆ ಹೇಳಿದರು.
ನಗರದ ಸತ್ಯಾ ಗಾರ್ಡನ್‌ನಲ್ಲಿ ಲಡಾಯಿ ಪ್ರಕಾಶನ ಗದಗ, ಕವಿ ಪ್ರಕಾಶ ಕವಲಕ್ಕಿ, ಚಿತ್ತಾರ ಕಲಾ ಬಳಗ ಧಾರವಾಡ ಹಾಗೂ ಮೇ ಸಾಹಿತ್ಯ ಮೇಳ ಬಳಗ ಸಿಂಧನೂರು ಸಹಯೋಗದಲ್ಲಿ ಆಯೋಜಿಸಿದ್ದ ಮೆದಿಕಿನಾಳ ಭೂ ಹೋರಾಟ ನೆನಪಿನ ವೇದಿಕೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಅಸಮಾನ ಭಾರತ ಸಮಾನತೆಗಾಗಿ ಸಂಘರ್ಷ ಅಂದು-ಇಂದು’ ಎಂಬ ಘೋಷವಾಕ್ಯದ 11ನೇ ಮೇ ಸಾಹಿತ್ಯ ಮೇಳದಲ್ಲಿ ಅವರು ಮಾತನಾಡಿದರು.
ಭಾಷೆ ಸಮುದಾಯದ ಸಂಸ್ಕೃತಿಯನ್ನು, ನೆನಪುಗಳನ್ನು, ಚಿಂತನಾಕ್ರಮವನ್ನು ಸಾಗಿಸುತ್ತದೆ. ಭಾಷೆಗೆ ಅಧಿಕಾರದ ಶಕ್ತಿ ಕೂಡ ಬಂದುಬಿಡುತ್ತದೆ. ಕೆಲವೊಮ್ಮೆ ದಮನಕಾರಿಯೂ ಆಗುತ್ತದೆ. ಭಾಷೆಗೆ ಅಂತರ್ಗತವಾದ ಶಕ್ತಿ ಇರುವುದಿಲ್ಲ, ಭಾಷಿಕರು ಬೇರೆ ಬೇರೆ ಚರಿತ್ರೆಯ ಸಂರ‍್ಭದಲ್ಲಿ ಪಡೆಯುವ ಶಕ್ತಿಗೆ ಅನುಸಾರವಾಗಿ ಧೋರಣೆಗೆ ಅನುಸಾರವಾಗಿ ಭಾಷೆಗೆ ಈ ಗುಣ ಬರುತ್ತದೆ ಎಂದರು.
ಇಂಗ್ಲಿಷ್‌ಗೆ ಎಲ್ಲಿಲ್ಲದ ಮಹತ್ವ ಬಂದಿದೆ. ಹಾಗಾಗಿ ಇವತ್ತು ಹಳ್ಳಿಗಳಲ್ಲಿ ಬಹಳಷ್ಟು ಜನರು ಇಂಗ್ಲಿಷ್ ಶಾಲೆಯಲ್ಲಿ ಮಕ್ಕಳನ್ನು ಕಲಿಸುತ್ತಿದ್ದಾರೆ. ಇಂಗ್ಲಿಷ್ ಸಾಮಾಜಿಕ ಮುಂಚಲನೆಯ ಸಾಧನವಾಗಿದೆ ಎಂಬುದನ್ನು ಮರೆಯಬಾರದು. ಯಾಕೆ ದಲಿತರು ಇಂಗ್ಲಿಷನ್ನು ಬಿಡುಗೆಯ ಸಾಧನವಾಗಿ ಬಳಸ್ತಾರೆ ಅನ್ನೋದನ್ನು ಕೇಳಿಕೊಳ್ಳಬೇಕು. ದ್ರಾವಿಡ ಭಾಷೆಗಳ ದಕ್ಷಿಣ ಭಾರತದಲ್ಲಿ ಹಿಂದಿಯ ಸಾಮ್ರಾಜ್ಯಶಾಹಿಯ ಆಕ್ರಮಣಶೀಲತೆಯನ್ನು ಎದುರಿಸಲು ಇಂಗ್ಲಿಷನ್ನು ಬಳಸುತ್ತಿದ್ದಾರೆ.
ಇಂಗ್ಲಿಷ್ ಪ್ರೊಫೆಸರ್ ಆಗಿದ್ದ ಬಿಎಂಶ್ರೀ ಅವರಿಗೂ ಕನ್ನಡ ಲೇಖಕರಾಗಿದ್ದ ಕುವೆಂಪು ಅವರಿಗೂ ಇಂಗ್ಲಿಷ್ ಭಾಷೆಯ ಬಗ್ಗೆ ಭಿನ್ನ ಅಭಿಪ್ರಾಯಗಳಿದ್ದವು. ಕುವೆಂಪು ಅವರು ‘ನಮಗೆ ಬೇಕಾದ ಇಂಗ್ಲಿಷ್ ಬೇಕು’ ಎನ್ನುವ ಪುಸ್ತಕ ಬರಿದಿದ್ದಾರೆ. ಲೋಕದ ಜೊತೆಗೆ ಸಂವಾದ ಮಾಡಲು ಇಂಗ್ಲಿಷ್ ಬೇಕು. ಆದರೆ ಶಿಕ್ಷಣ ಮಾಧ್ಯಮವಾಗಿ, ಕಲಿಕೆಯ ಮಾಧ್ಯಮವಾಗಿ ನಮಗೆ ಬೇಡ ಎಂಬುದು ಅವರ ಅಭಿಪ್ರಾಯ. ಭಾರತದ ಸಮಾಜ ಸುಧಾರಕರಾದ ರಾಜಾರಾಮ್ ಮೋಹನ್ ರಾಯ್, ಟ್ಯಾಗೋರ್, ಅಂಬೇಡ್ಕರ್, ಕವಿ ಕುವೆಂಪು ಎಲ್ಲರೂ ಕೂಡ ವಿಮೋಚನೆಯ ಅಸ್ತ್ರವಾಗಿ ಇಂಗ್ಲಿಷ್ ಅನ್ನು ಬಳಸಿದ್ದಾರೆ ಎಂದರು.
ದಕ್ಷಿಣ ಭಾರತೀಯರ ಮೇಲೆ ತ್ರಿಭಾಷಾ ಸೂತ್ರವನ್ನು ಕಡ್ಡಾಯಗೊಳಿಸಲಾಗಿದೆ. ಬಹಳ ಭಾಷೆಗಳನ್ನು ಕಲಿಯುವುದು ಭಾಷಿಕ ಬಹುತ್ವದ ಸಂಕೇತ. ಆದರೆ ಈ ಬಹುತ್ವದ ಜವಾಬ್ದಾರಿಯನ್ನು ದಕ್ಷಿಣದವರೆ ವಹಿಸುತ್ತಿದ್ದಾರೆ. ಆದರೆ ಉತ್ತರದವರಿಗೆ ಯಾವುದೇ ಹಂಗಿಲ್ಲ. ಉತ್ತರದವರಿಗೆ ಯಾವ ದಕ್ಷಿಣದ ಭಾಷೆಯನ್ನು ಕಲಿಯುವ ಗೋಜಿಲ್ಲ. ನಮಗೆ ಮಾತ್ರ ಈ ಮೂರು ಭಾಷೆಗಳು ಎಂದರು. ವರ್ಗ ನೆಲೆಯಲ್ಲಿ ಹೋರಾಟಗಾರ ರವೀಂದ್ರ ಹಳಿಂಗಳಿ, ಜಾತಿ ನೆಲೆಯಲ್ಲಿ ಸಿ.ಜಿ.ಲಕ್ಷ್ಮೀಪತಿ, ಲಿಂಗ ನೆಲೆಯಲ್ಲಿ ಕೆ.ಎಸ್.ಲಕ್ಷ್ಮಿ ಮಾತನಾಡಿದರು.
ಈ ಸಂದರ್ಭ ಅಮರೇಶ ಕುಂಬಾರ, ಸರಸ್ವತಿ ಪಾಟೀಲ್, ಕೃಷ್ಣಮೂರ್ತಿ ಧುಮುತಿ, ಶ್ರೀನಿವಾಸ, ಶರಣಪ್ಪ ಬಾಚಲಾಪುರ, ನೀಲಕಂಠಪ್ಪ, ನಾಗರಾಜ ಲಂಬು ಉಪಸ್ಥಿತರಿದ್ದರು.