ಕಸಾಪದಿಂದ 50 ಲಕ್ಷ ರೂ. ದೇಣಿಗೆ ದುರುಪಯೋಗ : ಬಸವರಾಜ ನಾಯಕ ಆರೋಪ

ರಾಯಚೂರು : ಕನ್ನಡಕ್ಕಾಗಿ ‘ಸಾವಿರದ ಒಂದು’ ಅಭಿಯಾನದಡಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಬೆಳವಣಿಗೆ ಹೆಸರಿನಲ್ಲಿ ಜಿಲ್ಲೆಯ 7 ತಾಲೂಕು ಸರಕಾರಿ ನೌಕರರಿಂದ ಸುಮಾರು 50 ಲಕ್ಷ ರೂ. ಗೂ ಹೆಚ್ಚು ದೇಣಿಗೆ ಸಂಗ್ರಹಿಸಿ ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಬಸವರಾಜ ನಾಯಕ ಮಸ್ಕಿ ಆರೋಪಿಸಿದ್ದಾರೆ.
ಪಟ್ಟಣದಲ್ಲಿ ರವಿವಾರ ಜಂಟಿಯಾಗಿ ಮಾಧ್ಯಮ ಹೇಳಿಕೆ ನೀಡಿದ ಅವರು, ಕಸಾಪ ಜಿಲ್ಲಾಧ್ಯಕ್ಷರ ಚುನಾವಣೆಯಲ್ಲಿ ಸ್ವತಃ ನಾನು 7ತಾಲೂಕುಗಳಿಗೆ ರಂಗಣ್ಣ ಪಾಟೀಲ ಪರ ಮತಯಾಚನೆ ಮಾಡಿದ್ದೇನೆ. ನಮ್ಮ ತಾಲೂಕಿನವರೆ ಆದ ಅವರು ಜಿಲ್ಲೆಯಲ್ಲಿ ಕನ್ನಡ ಪರ ಚಟುವಟಿಕೆ, ಯುವ ಸಾಹಿತ್ಯ, ಮತ್ತು ಲೇಖಕರು ಬರಹಗಾರರನ್ನು ಬೆಳೆಸುತ್ತಾರೆ. ಜಿಲ್ಲಾ ಮತ್ತು ತಾಲೂಕು ಸಾಹಿತ್ಯ ಸಮ್ಮೇಳನ ನಡೆಸಿ ಜಿಲ್ಲೆಯ ಸಾಹಿತ್ಯ ಕ್ಷೇತ್ರ ಶ್ರೀಮಂತ ಗೊಳಿಸುತ್ತಾರೆ ಎಂದು ವಿಶ್ವಾಸ ಇಟ್ಟು ಬೆಂಬಲಿಸಿ ಚುನಾವಣೆಯಲ್ಲಿ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದೆ. ಆದರೆ ಇವರ ಸರ್ವಾಧಿಕಾರಿ ನಡೆ, ಭ್ರಷ್ಟಾಚಾರ ಮತ್ತು ಕನ್ನಡ ದ್ರೋಹ ಬೇಸರ ತರಿಸಿದೆ. ಇವರಿಂದ ಜಿಲ್ಲೆಯ ಸಾಹಿತ್ಯ ಕ್ಷೇತ್ರ ಮತ್ತು ಸಾಹಿತಿಗಳು ರಾಜ್ಯಮಟ್ಟದಲ್ಲಿ ಮುಜುಗರಕ್ಕೆ ಒಳಗಾಗಿದ್ದಾರೆ. ಜಿಲ್ಲೆಯ ಎಲ್ಲ ತಾಲೂಕು ಕಸಾಪ ಅಧ್ಯಕ್ಷರನ್ನು ವಜಾಗೊಳಿಸಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ನ ಬೈಲಾ ನಿಯಮಗಳನ್ನು ಉಲ್ಲಂಘಿಸಿ ಜಿಲ್ಲೆಯ ಸಾಹಿತ್ಯ ಕ್ಷೇತ್ರ ಕಲುಷಿತ ಗೊಳಿಸಿದ್ದಾರೆ. 1001 ರೂ. ಯಂತೆ ಸುಮಾರು 50 ಲಕ್ಷ ರೂ.ಗೂ ಅಧಿಕ ಹಣ ದೇಣಿಗೆ ಸಂಗ್ರಹಿಸಿ ಕಸಾಪ ವತಿಯಿಂದ ಯಾವುದೇ ಕಾರ್ಯ ಚಟುವಟಿಕೆ ನಡೆಸಿಲ್ಲ ಆ ಹಣ ಏನು ಮಾಡಿದ್ದಾರೆ ಎಂದು ಜಿಲ್ಲೆಯ ಜನರಿಗೆ ತಿಳಿಸಲಿ ಎಂದು ಅವರು ಹೇಳಿದ್ದಾರೆ.
ಸಿರವಾರ ತಾಲೂಕು ಅಧ್ಯಕ್ಷ ಸುರೇಶ ಹೀರಾ ಕೂಡ ವಕೀಲರ ಮೂಲಕ ನೊಟೀಸ್ ನೀಡಿದ್ದಾರೆ. ತಾಲೂಕು ಘಟಕದಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಸಾಹಿತಿಗಳಿಗೆ ಮರು ಆಯ್ಕೆ ಅವಕಾಶ ಇಲ್ಲ. ಆದರೆ ದೇವದುರ್ಗ ಅಧ್ಯಕ್ಷ ಎಚ್ ಶಿವರಾಜ ಅವರನ್ನು 3 ನೇ ಭಾರಿಗೆ ಆಯ್ಕೆ ಮಾಡಿದ್ದಾರೆ. ರಂಗಣ್ಣ ಪಾಟೀಲ ತನ್ನ ಚಾಕರಿ ಮಾಡುವ ಮತ್ತು ಕನ್ನಡಕ್ಕಾಗಿ ಸಾವಿರ ಒಂದು ಅಭಿಯಾನದಡಿ ಹಣ ಸಂಗ್ರಹಕ್ಕೆ ವಿರೋಧಿಸಿದ ಕಸಾಪ ಅಧ್ಯಕ್ಷರನ್ನು ವಜಾಗೊಳಿಸಿ ಬೆಂಬಲಿಸಿದ ಅಧ್ಯಕ್ಷರನ್ನು ಮರು ಆಯ್ಕೆ ಮಾಡಿದ್ದಾರೆ ಎಂದು ಕಸಾಪ ಅಜೀವ ಸದಸ್ಯ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ರಂಗಪ್ಪ ಗೋಸಲ್‌ಆರೋಪಿಸಿದ್ದಾರೆ.
ಕನ್ನಡ ಪರ ಕಾರ್ಯ ಚಟುವಟಿಕೆ ನಿರ್ಮಿಸಿದ ರಾಯಚೂರು ನಗರ ಕನ್ನಡ ಭವನ ಬಾಡಿಗೆಗೆ ನೀಡಿ ಖಾಸಗಿ ವ್ಯಕ್ತಿಗಳಿಂದ ಬಾಡಿಗೆ ಪಡೆಯುತ್ತಿದ್ದಾರೆ.
ಇತ್ತೀಚಿಗೆ ಮಂತ್ರಾಲಯದಲ್ಲಿ ಜರಗಿದ ಗಡಿನಾಡು ಸಮ್ಮೇಳನಕ್ಕೆ ರಂಗಣ್ಣ ಪಾಟೀಲ ಅನಾರೋಗ್ಯದಿಂದ ಇರುವ ಕಾರಣ ಆಹ್ವಾನ ನೀಡಿಲ್ಲ. ಆದರೆ ಕೇಂದ್ರ ಸಮಿತಿ ವಿರುದ್ಧವೇ ಗಡಿನಾಡು ಸಮ್ಮೇಳನದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಉದ್ದಟತನ ತೋರಿಸಿದ್ದಾರೆ. ರಂಗಣ್ಣ ಪಾಟೀಲ ನಡೆಯಿಂದ ಜಿಲ್ಲೆಯ ಸಾಹಿತ್ಯವಲದಲ್ಲಿ ಗೊಂದಲಮಯ ವಾತಾವರಣ ನಿರ್ಮಾಣಗೊಂಡಿದೆ. ಕಸಾಪ ಜಿಲ್ಲಾಧ್ಯಕ್ಷರನ್ನು ವಜಾಗೊಳಿಸಿ ಆಡಳಿತಾಧಿಕಾರಿ ಅಥವಾ ನೂತನ ಅಧ್ಯಕ್ಷರನ್ನು ನೇಮಕ ಮಾಡಬೇಕು ಎಂದು ದೇವದುರ್ಗ ಕಸಾಪ ನಿಕಟ ಪೂರ್ವ ಅಧ್ಯಕ್ಷ ಮರಿಲಿಂಗಪ್ಪ ಕೋಳೂರ ಆಗ್ರಹಿಸಿದ್ದಾರೆ.
ರಾಯಚೂರು ಜಿಲ್ಲೆಯ ಕಸಾಪ ತಾಲೂಕು ಅಧ್ಯಕ್ಷರಗಳ ವಜಾ ಮತ್ತು ಹೊಸ ಅಧ್ಯಕ್ಷರ ನೇಮಕ ಮಾಡಿರುವ ಬಗ್ಗೆ ಮಾಹಿತಿ ಇಲ್ಲ. ವಜಾ ಮತ್ತು ನೇಮಕ ಪ್ರಕ್ರಿಯೆಗೆ ಕೇಂದ್ರ ಸಮಿತಿ ಅನುಮೋದನೆ ಕಡ್ಡಾಯ. ದೇಣಿಗೆ ಸಂಗ್ರಹಿಸಿದ ಮಾಹಿತಿ ಇಲ್ಲ. ದೂರು ನೀಡಿದರೆ ಕ್ರಮ ತನಿಖೆ ಮಾಡಿ ಕೈಗೊಳ್ಳುವೆ.
- ಡಾ ಮಹೇಶ ಜೋಷಿ, ರಾಜ್ಯಾಧ್ಯಕ್ಷ ಕನ್ನಡ ಸಾಹಿತ್ಯ ಪರಿಷತ್







