ನವಲಕಲ್ ಗ್ರಾ.ಪಂ ನಲ್ಲಿ 15ನೇ ಹಣಕಾಸು ಯೋಜನೆ ಅನುದಾನ ದುರುಪಯೋಗ: ದುರುಗಪ್ಪ ಆರೋಪ

ರಾಯಚೂರು: ಸಿರವಾರ ತಾಲೂಕಿನ ನವಲಕಲ್ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರು ವಿವಿಧ ಯೋಜನೆಯ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಗ್ರಾಮಸ್ಥ ದುರ್ಗಪ್ಪ ಆರೋಪಿಸಿದರು.
ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2025-26ನೇ ಸಾಲಿನ 15ನೇ ಹಣಕಾಸು ಹಾಗೂ ವಿವಿಧ ಯೋಜನೆಯಡಿ ಮಂಜೂರಾಗಿರುವ ಅನುದಾನದಲ್ಲಿ ಅಕ್ರಮ ನಡೆದಿದೆ. ಈ ಅಕ್ರಮದಲ್ಲಿ ಗ್ರಾಪಂ ಪಿಡಿಒ ಹಾಗೂ ಅಧ್ಯಕ್ಷರು ಭಾಗಿಯಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಹಣಕಾಸು ಲೆಕ್ಕ ಪರಿಶೋಧನೆ ಸ್ಥಾಯಿ ಸಮಿತಿಯ ಅಧ್ಯಕ್ಷ ಹಾಗೂ ಸದಸ್ಯರನ್ನು ಸಭೆಗೆ ಕರೆಯದೇ ತಮ್ಮ ಮನಸೋಇಚ್ಛೆಯಂತೆ ಕ್ರಿಯಾ ಯೋಜನೆಯಲ್ಲಿ 25ಲಕ್ಷ ರೂ. ಹಣವನ್ನು ದುರ್ಬಳಕೆ ಮಾಡಿದ್ದಾರೆ ಎಂದು ದೂರಿದರು.
ಗ್ರಾಪಂಯಲ್ಲಿ ಬಾರಿ ಭ್ರಷ್ಟಾಚಾರ ಎಸಗಿದ್ದು, ತನಿಖಾ ತಂಡ ರಚಿಸಿ ಸಮಗ್ರ ತನಿಖೆ ಮಾಡಿ ಅಧಿಕಾರಿ ಹಾಗೂ ಅಧ್ಯಕ್ಷರ ಮೇಲೆ ಕ್ರಿಮಿನಲ್ ಮೊಕ್ಕದ್ದಮೆ ದಾಖಲಿಸಿ ತಪ್ಪಿತಸ್ಥ ಅಧಿಕಾರಿಗಳಿಂದ ದುರ್ಬಳಕೆ ಮಾಡಿರುವ ಹಣವನ್ನು ಸರ್ಕಾರದ ಲೆಕ್ಕಶೀರ್ಷಿಕೆಗೆ ಮರಳಿ ಸೇರಿಸಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಿಮ್ಮಣ್ಣ ನಾಯಕ ನಾರಬಂಡ, ಚನ್ನಮ್ಮ, ಶಾಂತಪ್ಪ, ಯಂಕಮ್ಮ, ಯಲ್ಲಪ್ಪ, ಲಕ್ಷ್ಮಯ್ಯ ಉಪಸ್ಥಿತರಿದ್ದರು.