ರಾಯಚೂರು | ಪರಿಶಿಷ್ಟ ಸಮುದಾಯಗಳ ಅನುದಾನ ದುರ್ಬಳಕೆ : ಭೋವಿ ಸಮಾಜದಿಂದ ಪ್ರತಿಭಟನೆ

ರಾಯಚೂರು: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮುದಾಯಗಳ ಅನುದಾನ ದುರ್ಬಳಕೆ ಹಾಗೂ ಭೋವಿ ಅಭಿವೃದ್ಧಿ ನಿಗಮದ ಮೀಸಲು ಹಣವನ್ನು ರಾಜ್ಯ ಸರಕಾರ ಅನ್ಯ ಕಾರ್ಯಗಳಿಗೆ ಬಳಸುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಭೋವಿ, ವಡ್ಡರ ಸಂಘ ಹಾಗೂ ಬಿಜೆಪಿ ಪಕ್ಷದಿಂದ ಜಂಟಿಯಾಗಿ ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಆಶಾಪೂರ ರಸ್ತೆಯ ಸಿದ್ದರಾಮೇಶ್ವರ ಪುತ್ಥಳಿಯಿಂದ ಬೈಕ್ ರ್ಯಾಲಿ ನಡೆಯಿತು. ಪ್ರತಿಭಟನೆಯಲ್ಲಿ ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ರಾಜ್ಯ ಸರಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯದ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ. ಗ್ಯಾರೆಂಟಿಗಳ ಮೂಲಕ ಆಶ್ವಾಸನೆ ಕೊಟ್ಟು ಅಧಿಕಾರಕ್ಕೆ ಬಂದಿದ್ದು, ಗ್ಯಾರಂಟಿ ಯೋಜನೆಗಳನ್ನು ಸರಿಯಾಗಿ ಫಲಾನುಭವಿಗಳಿಗೆ ನೀಡುತ್ತಿಲ್ಲ ಎಂದು ಆರೋಪಿಸಿದರು.
ದಲಿತರ ಹಣವನ್ನು ಲೂಟಿ ಮಾಡಿ, ದಲಿತರಿಗೆ ಮೋಸ ಮಾಡಲಾಗುತ್ತಿದೆ. ಬಿಜೆಪಿ ಅಧಿಕಾರವಧಿಯಲ್ಲಿ ದಲಿತ ಸಮುದಾಯದಲ್ಲಿರುವ ರೈತರಿಗೆ ವಿವಿಧ ಯೋಜನೆಗಳನ್ನು ನೀಡಲಾಗುತ್ತಿತ್ತು. ಆದರೆ ಕಾಂಗ್ರೆಸ್ ಈ ಯೋಜನೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಭೋವಿ ಸಮಾಜ ರಾಜ್ಯ ಸರಕಾರದ ನಡೆಯಿಂದ ಬೀದಿಗೆ ಬಂದಿದೆ ಎಂದು ತಿಳಿಸಿದರು.
ಮಾಜಿ ಸಂಸದ ಬಿವಿ ನಾಯಕ ಮಾತನಾಡಿ, ಕಾಂಗ್ರೆಸ್ ಪಕ್ಷ ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಒಂದು ಕೈಯಿಂದ ಕೊಟ್ಟಂತೆ ನಟಿಸಿ ಇನ್ನೊಂದು ಕೈಯಿಂದ ಕಸಿದುಕೊಳ್ಳುತ್ತಿದೆ. ಅಹಿಂದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿಯೇ ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನವನ್ನು ಕಳ್ಳತನ ಮಾಡಲಾಗುತ್ತಿದೆ. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದಲ್ಲಿರುವವರೆಗೂ ದಲಿತರಿಗೆ ಅನ್ಯಾಯವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಶಾಸಕ ಮಾನಪ್ಪ ವಜ್ಜಲ್, ಮಾಜಿ ಎಂಎಲ್‌ಸಿ ಎನ್.ಶಂಕ್ರಪ್ಪ, ಮಾಜಿ ಶಾಸಕರಾದ ಬಸನಗೌಡ ಬ್ಯಾಗವಾಟ್, ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಪಾಟೀಲ್ ಲೆಕ್ಕಿಹಾಳ, ಸಮಾಜದ ಅಧ್ಯಕ್ಷ ನಾರಾಯಣಸ್ವಾಮಿ, ಪ್ರಮುಖರಾದ ವೆಂಕಟೇಶ, ಗಂಗಾಧರ ನಾಯಕ, ರವೀಂದ್ರ ಜಲ್ದಾರ, ಕೆ.ತಿಮ್ಮಪ್ಪ, ಲಕ್ಷ್ಮಣ ರಾಮನಗರ, ಸತ್ಯಪ್ಪ, ರಾಘವೇಂದ್ರ ಉಟ್ಟೂರು, ವೈ.ಗೋಪಾಲರೆಡ್ಡಿ, ಕೊಟ್ರೇಶಪ್ಪ ಕೋರಿ, ವಿಜಯಕುಮಾರ ಸಜ್ಜನ್, ಪಾಲಿಕೆ ಸದಸ್ಯ ನಾಗರಾಜ ಸೇರಿದಂತೆ ಇತರರು ಉಪಸ್ಥಿತರಿದ್ದರು.







