ದೇವದುರ್ಗ ತಾಲೂಕಿನಲ್ಲಿ ಟೋಲ್ ಗೇಟ್ ಅಳವಡಿಸಿದ್ದನ್ನು ಖಂಡಿಸಿ ಕೆಡಿಪಿ ಸಭೆಯಲ್ಲಿ ಶಾಸಕಿ ಕರೆಮ್ಮ ಜಿ.ನಾಯಕ ಪ್ರತಿಭಟನೆ

ರಾಯಚೂರು: ಜಿಲ್ಲೆಯಲ್ಲಿ ಎಲ್ಲೂ ಇಲ್ಲದ ಟೋಲ್ ಗೇಟ್ ಅನ್ನು ದೇವದುರ್ಗ ತಾಲೂಕಿನಲ್ಲಿ ಹಾಕಿ ನನ್ನ ಕ್ಷೇತ್ರದ ಜನರ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಅಸಮಾಧಾನಗೊಂಡು ಶಾಸಕಿ ಕರೆಮ್ಮ ಜಿ.ನಾಯಕ ಅವರು ಕೆಡಿಪಿ ಸಭೆಯ ಮುಂಭಾಗ ನೆಲದಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.
ನನ್ನ ಕ್ಷೇತ್ರದಲ್ಲಿ ಟೋಲ್ ಗೇಟ್ ಹಾಕಿ ಹಣ ವಸೂಲಿ ಮಾಡುತ್ತಿದ್ದಾರೆ. ನಾನು ಇದರ ಬಗ್ಗೆ ಹಲವಾರು ಬಾರಿ ಸಚಿವರಲ್ಲಿ ತಿಳಿಸಿದರೂ ಕೂಡ ಸ್ಪಂದಿಸುತ್ತಿಲ್ಲ, ನನ್ನ ಬೆಂಬಲಿಗರು ಹೋರಾಟ ಮಾಡಿದರೆ ಕೇಸ್ ದಾಖಲಿಸಲಾಗುತ್ತಿದೆ. ನನ್ನ ಹೆಸರಿಗೆ ಮಸಿ ಬಳೆಯಲು ದುರುದ್ದೇಶದಿಂದ ಟೋಲ್ ಹಾಕಿದ್ದಾರೆ. ಜನರು ನನ್ನ ಮೇಲೆ ಅನುಮಾನ ಪಡುತ್ತಿದ್ದಾರೆ ಎಂದು ಕರೆಮ್ಮ ಆರೋಪಿಸಿದರು.
ಕಲಬುರಗಿ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಗೇಟ್ ಇಲ್ಲ. ಆದರೆ ದೇವದುರ್ಗ ಕ್ಷೇತ್ರದಲ್ಲಿ 40 ಕಿಮಿ ಮಧ್ಯೆ ಎರಡು ಟೋಲ್ ಅಳವಡಿಸಲಾಗಿದೆ. ಇದನ್ನು ಶಾಶ್ವತವಾಗಿ ರದ್ದುಗೊಳಿಸಬೇಕು ಎಂದು ಪಟ್ಟು ಹಿಡಿದರು.
ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು ಕೂಡಲೇ ಟೋಲ್ ತಾತ್ಕಲಿಕವಾಗಿ ಬಂದ್ ಮಾಡಲು ಡಿಸಿಗೆ ಸೂಚಿಸಿದರು. ನನ್ನ ಕ್ಷೇತ್ರಕ್ಕೆ ಅನುದಾನ ನೀಡುತ್ತಿಲ್ಲ ಅಭಿವೃದ್ಧಿಯಾಗದ ಕಾರಣ ಸಾರ್ವಜನಿಕ ಕಾರ್ಯಾಕ್ರಮಗಳಲ್ಲಿ ನನಗೆ ಮತ ಹಾಕಿದ ಜನರು ಪ್ರಶ್ನಿಸುತ್ತಿದ್ದಾರೆ. ನರೇಗಾ ಯೋಜನೆಯಡಿ ಭ್ರಷ್ಟಾಚಾರಚಾಗಿದೆ ಎಂದು ಅನೇಕ ಪಿಡಿಒಗಳನ್ನು ಸಸ್ಪೆಂಡ್ ಮಾಡಿದ್ದರಿಂದ ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗಿದೆ ಎಂದು ಆರೋಪಿಸಿದರು.
ಸಚಿವರು ಅವರ ಬೇಡಿಕೆಗಳನ್ನು ಕೇಳಿದ ನಂತರ ಸಮಸ್ಯೆ ಬಗೆಹರಿಸಲಾಗುವುದು ಹಾಗೂ ಟೋಲ್ ಗೇಟ್ ಬಗ್ಗೆ ಸರ್ಕಾರ ಹಾಗೂ ಸಂಬಂಧಿಸಿದ ಸಚಿವರ ಜೊತೆ ಮಾತನಾಡಲಾಗುವುದು ಎಂದು ಭರವಸೆ ನೀಡಿದ ಬಳಿಕ ಶಾಸಕಿ ಕರೆಮ್ಮ ಅವರು ಪ್ರತಿಭಟನೆ ಕೈಬಿಟ್ಟರು.







