ರಾಯಚೂರು | ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮದಲ್ಲಿ ಪುತ್ರನ ಮದುವೆ; ಶಾಸಕರ ನಡೆಗೆ ವ್ಯಾಪಕ ಪ್ರಶಂಸೆ

ರಾಯಚೂರು: ಜಿಲ್ಲೆಯ ಶಾಸಕರೊಬ್ಬರು ತಮ್ಮ ಪುತ್ರನ ವಿವಾಹ ಸರಳವಾಗಿ, ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನೆರವೇರಿಸಿ ಮಾದರಿಯಾಗಿದ್ದಾರೆ.
ಜಿಲ್ಲೆಯ ಮಸ್ಕಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸನಗೌಡ ತುರ್ವಿಹಾಳ ಅವರು ತಮ್ಮ ಪುತ್ರ ಸತೀಶ್ ಅವರನ್ನು ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಅವರ ಸಹೋದರನ ಮಗಳ ಜೊತೆ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸರಳವಾಗಿ ವಿವಾಹ ಮಾಡಿಸಿದ್ದಾರೆ.
ಮಸ್ಕಿ ತಾಲೂಕಿನ ತುರುವಿಹಾಳದ ಅಮೋಘಸಿದ್ದೇಶ್ವರ ಮಠದಲ್ಲಿ ಮಂಗಳವಾರ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 75 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಕಾರ್ಯಕ್ರಮವನ್ನು ಇಬ್ಬರು ಶಾಸಕರು ಸರಳವಾಗಿ ನೆರವೇರಿಸಿದ್ದು, ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಈ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಚಿವ ಭೈರತಿ ಸುರೇಶ, ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ್ ಪಾಟೀಲ್, ಸಣ್ಣ ನೀರಾವರಿ ಸಚಿವ ಎನ್ ಎಸ್ ಬೋಸರಾಜು ಸೇರಿದಂತೆ ಹಲವು ಸಚಿವ, ಶಾಸಕರು ಭಾಗವಹಿಸಿದ್ದರು.
ಇದೇ ವೇಳೆ ತುರುವಿಹಾಳದಲ್ಲಿ ಸಂಗೊಳ್ಳಿ ರಾಯಣ್ಣ ಹಾಗೂ ಕನಕದಾಸ ಪುತ್ಥಳಿ ಅನಾವರಣ ಹಾಗೂ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಾಯಿತು.





