ಹಣ, ಐಶ್ವರ್ಯ ಮುಖ್ಯವಲ್ಲ ಸಮಾಜಕ್ಕೆ ಹಂಚುವ ಹೃದಯವಂತಿಕೆ ಮುಖ್ಯ: ಸಭಾಧ್ಯಕ್ಷ ಯು.ಟಿ.ಖಾದರ್

ರಾಯಚೂರು: ಹಣ ಮತ್ತು ಐಶ್ವರ್ಯಕ್ಕಿಂತ ಅದನ್ನು ಸಮಾಜಕ್ಕೆ ಹಂಚುವ ಹೃದಯವಂತಿಕೆ ಮುಖ್ಯ. ಗುತ್ತಿಗೆದಾರ ಅಕ್ಬರ್ ಪಾಷಾ ಅವರು ತಮ್ಮ ಪುತ್ರನ ವಿವಾಹದ ಸಂಭ್ರಮದ ಜೊತೆಗೆ 121 ಬಡ ಜೋಡಿಗಳಿಗೆ ಸಾಮೂಹಿಕ ವಿವಾಹ ಮಾಡಿಸುವ ಮೂಲಕ ದೇಶಕ್ಕೆ ಮಾದರಿ ಸಂದೇಶ ನೀಡಿದ್ದಾರೆ ಎಂದು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ಮಾನ್ವಿಯ ಪ್ರಥಮ ದರ್ಜೆ ಗುತ್ತಿಗೆದಾರ ಹಾಗೂ ದಾರುಸ್ಸಲಾಮ್ ಫೌಂಡೇಶನ್ ಅಧ್ಯಕ್ಷ ಸೈಯದ್ ಅಕ್ಬರ್ ಹುಸೇನಿ (ಅಕ್ಬರ್ ಪಾಷಾ) ಅವರು ತಮ್ಮ ಪುತ್ರನ ಮದುವೆ ಅಂಗವಾಗಿ ಮಾನ್ವಿ ಪಟ್ಟಣದ ಅಕ್ಬರಿಯ ಮಸೀದಿ ಬಳಿ ಆಯೋಜಿಸಿದ್ದ ಮುಸ್ಲಿಂ ಸಮುದಾಯದ 121 ಜೋಡಿಗಳ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅನುಕೂಲಸ್ಥರೆಲ್ಲರಿಗೂ ಇಂತಹ ಉದಾರ ಮನಸ್ಸು ಬರುವುದಿಲ್ಲ. ಖಾಸಗಿ ವ್ಯಕ್ತಿಯೊಬ್ಬರು ಏಕಕಾಲಕ್ಕೆ 121 ಜೋಡಿಗಳ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಇದೇ ಮೊದಲು. ಈ ಕಾರ್ಯದ ಮೂಲಕ ಮಾನ್ವಿ ಪಟ್ಟಣವು ಇತಿಹಾಸದ ಪುಟ ಸೇರಲಿದೆ. ತಮ್ಮ ಕುಟುಂಬದ ಸಂತೋಷದಂತೆಯೇ ಇತರ ಕುಟುಂಬಗಳೂ ಸಂತೋಷವಾಗಿರಬೇಕು ಎಂದು ಬಯಸಿ ಅಕ್ಬರ್ ಪಾಷಾ ಅವರು ಈ ಪುಣ್ಯದ ಕೆಲಸ ಮಾಡಿದ್ದಾರೆ ಎಂದು ಯು.ಟಿ.ಖಾದರ್ ಗುಣಗಾನ ಮಾಡಿದರು.
ಮಗನ ಮದುವೆಯ ಸವಿನೆನಪಿಗಾಗಿ ಬಡ ಹಾಗೂ ಮಧ್ಯಮ ವರ್ಗದ ವಧು-ವರರಿಗೆ ಹೊಸ ಜೀವನ ಕಲ್ಪಿಸಿಕೊಟ್ಟ ಅಕ್ಬರ್ ಹುಸೇನಿ ಅವರ ಕುಟುಂಬಕ್ಕೆ ದೇವರು ಒಳ್ಳೆಯದನ್ನು ಮಾಡಲಿ. ನೂತನ ದಂಪತಿಗಳ ಜೀವನ ಸುಖಕರವಾಗಿರಲಿ ಎಂದು ಹಾರೈಸಿದ ಸಭಾಧ್ಯಕ್ಷರು, ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ಪ್ರೇರಣೆಯಾಗಲಿ ಎಂದು ಆಶಿಸಿದರು.







