ಲಿಂಗಸುಗೂರು | ಮಂಗಗಳಿಂದ ದಾಳಿ : ಹಲವರಿಗೆ ಗಂಭೀರ ಗಾಯ

ಸಾಂದರ್ಭಿಕ ಚಿತ್ರ
ರಾಯಚೂರು: ಲಿಂಗಸುಗೂರು ತಾಲೂಕಿನ ಗುರುಗುಂಟಾ ಸಮೀಪದ ಟಣಮಕಲ್ ಸುತ್ತಮುತ್ತ ಮಂಗಗಳ ಹಾವಳಿ ಹೆಚ್ಚಾಗಿದ್ದು, ಕಳೆದ ಎರಡು ಮೂರು ದಿನಗಳಿಂದ ಸಾರ್ವಜನಿಕರನ್ನು ಕಚ್ಚಿ ಗಾಯಗೊಳಿಸುತ್ತಿವೆ.
ಪೈದೊಡ್ಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಟಣಮಕಲ್ ಗ್ರಾಮದ ವೃದ್ಧೆ ಯಲ್ಲಮ್ಮ ಅಂಬಿಗೇರ್ ಮನೆಯ ಮುಂದೆ ಮುಸುರಿ, ಪಾತ್ರೆ ತೊಳೆಯುವಾಗ ಏಕಾಏಕಿ ದಾಳಿ ಮಾಡಿ ಕೈ,ಕಾಲುಗಳಿಗೆ ಕಚ್ಚಿದ್ದು, ಗಾಯಗೊಂಡ ಮಹಿಳೆಯನ್ನು ಲಿಂಗಸುಗೂರು ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ ಹೆಚ್ಚಿನ ಚಿಕಿತ್ಸೆಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಯಲ್ಲಮ್ಮ ಬಳಿಕ ಶುಕ್ರವಾರ ತಿಮ್ಮಣ್ಣ ಗಡಿ, ದೇವಮ್ಮ ನಿಂಗಪ್ಪ, ಗಂಗಮ್ಮ ಮಾನಪ್ಪ, ದುರುಗಮ್ಮ ಗರಡಪ್ಪ ಅವರ ಮೇಲೆ ದಾಳಿ ಮಾಡಿದೆ ಎನ್ನಲಾಗಿದೆ. ಈ ಹಿಂದೆ ತಿಮ್ಮಪ್ಪ ಗದ್ದೇರ್ ಹಾಗು ಸಿದ್ದಪ್ಪರಾಯದುರ್ಗದ ಇಬ್ಬರ ಮೇಲೆ ದಾಳಿ ಮಾಡಿತ್ತು ಎಂದು ವರದಿಯಾಗಿದೆ.
ಟಣಮಕಲ್ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೂ ತಂದಾಗ, ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದಾಗ ಸಿಗಲಿಲ್ಲ ಎನ್ನಲಾಗಿದೆ.





