ಮುದಗಲ್ | ಹೆಚ್ಚಿನ ದರಕ್ಕೆ ಗೊಬ್ಬರ ಮಾರಾಟ ಮಾಡುತ್ತಿದ್ದ ಅಂಗಡಿಗೆ ಮುತ್ತಿಗೆ ಹಾಕಿದ ರೈತರು
ಕೃತಕ ಅಭಾವ ಸೃಷ್ಠಿಸುತ್ತಿರುವ ಗೊಬ್ಬರ ಅಂಗಡಿಗಳ ಪರವಾನಗಿ ರದ್ದುಗೊಳಿಸಲು ಒತ್ತಾಯ

ಮುದಗಲ್: ಜಿಲ್ಲೆಯಲ್ಲಿ ನಿಗದಿತ ದರಕ್ಕಿಂತ ಅಧಿಕ ಬೆಲೆಗೆ ರಸಗೊಬ್ಬರವನ್ನು ಮಾರಾಟ ಮಾಡುತಿದ್ದ ಮುದಗಲ್ ಪಟ್ಟಣದ ಅಂಗಡಿಗೆ ಮುತ್ತಿಗೆ ಹಾಕಿದ ರೈತರು ಪ್ರತಿಭಟನೆ ನಡೆಸಿ, ಆಕ್ರೋಶ ಹೊರಹಾಕಿದರು.
ಮುದಗಲ್ ಬಸ್ ನಿಲ್ದಾಣದ ಹತ್ತಿರ ಇರುವ ಬಾಲಾಜಿ ಕೃಷಿ ಕೇಂದ್ರ ಅಂಗಡಿಯಲ್ಲಿ ಡಿಎಪಿ ರಸ ಗೊಬ್ಬರ ಸರ್ಕಾರದ ನಿಗದಿತ ಬೆಲೆಗಿಂತ 200 ರಿಂದ 300 ರೂ.ವರೆಗೆ ಹೆಚ್ಚಿನ ದರಕ್ಕೆ ಮಾರಾಟ ಮಾಡಿದ್ದರು. ಈ ಬಗ್ಗೆ ಸ್ಥಳಕ್ಕೆ ಆಗಮಿಸಿದ ರೈತ ಸಂಘದ ಮುಖಂಡರು ಗೊಬ್ಬರ ಅಂಗಡಿ ಮಾಲಕನನ್ನು ತರಾಟೆಗೆ ತೆಗೆದುಕೊಂಡರು.
ಅಲ್ಲದೆ ಕೃಷಿ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿ, ಅಧಿಕ ಬೆಲೆಗೆ ಮಾರಾಟ ಮಾಡುತ್ತಿರುವ ಅಂಗಡಿಯ ಮಾಲಕನ ಪರವಾನಿಗೆ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.
ಈ ಬಗ್ಗೆ ಎಚ್ಚೆತ್ತುಕೊಂಡ ಸ್ಥಳಿಯ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಹಾಂತಯ್ಯ ಸ್ವಾಮಿ ಕೂಡಲೇ ಸ್ಥಳಕ್ಕೆ ಆಗಮಿಸಿ ಬಾಲಾಜಿ ಕೃಷಿ ಕೇಂದ್ರದ ಮಾಲಕರ ದಾಖಲೆ ಪರಿಶೀಲನೆ ನಡೆಸಿದರು. ರೈತರಿಗೆ ರಸ ಗೊಬ್ಬರದ ಕೃತಕ ಅಭಾವ ಉಂಟು ಮಾಡಿ ಅಧಿಕ ಬೆಲೆಗೆ ಮಾರಾಟ ಮಾಡಿದ್ದನ್ನು ಗಮನಿಸಿ ಅಂಗಡಿ ಮಾಲಕರಿಗೆ ಎಚ್ಚರಿಗೆ ನೀಡಿದರು. ಅಲ್ಲದೆ ರೈತರಿಂದ ಹೆಚ್ಚಿನ ಹಣ ಪಡೆದಿದ್ದನ್ನು ಸ್ಥಳದಲ್ಲಿಯೇ ವಾಪಾಸ್ ಕೊಡಿಸಿದರು. ಆದರೂ ರೈತರು ಅಂಗಡಿ ಮಾಲಕರ ಮಾರಾಟ ಪರವಾನಿಗೆಯನ್ನು ರದ್ದು ಪಡಿಸಬೇಕು ಎಂದು ಬಿಗಿ ಪಟ್ಟು ಹಿಡಿದರು. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕೃಷಿ ಅಧಿಕಾರಿ ಮಹಾಂತಯ್ಯ ಸ್ವಾಮಿ ಭರವಸೆ ನೀಡಿದರು.
ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುತ್ರ ಗೌಡ, ಮುಖಂಡರಾದ ಮಹಾಂತಗೌಡ ಕನಸಾವಿ, ಮಲ್ಲಿಕಾರ್ಜುನ, ಮುದಗಲ್ ಹೋಬಳಿ ಅಧ್ಯಕ್ಷ ಸೋಮರೆಡ್ಡಿ, ಶಿವರಾಜ, ಸಂಗಣ್ಣ, ಹನುಮನಗೌಡ, ಸಂಗನಗೌಡ, ಬಸನಗೌಡ ಉಪಸ್ಥಿತರಿದ್ದರು.







