ಮಸ್ಕಿ | ವಿಕಲಚೇತನರ ಕುಂದು ಕೊರತೆ ಸಭೆ ಕರೆಯಲು ಮನವಿ

ಮಸ್ಕಿ : ತಾಲೂಕಿನ ವಿಕಲಚೇತನರು ಹಾಗೂ ಅವರ ಪೋಷಕರು ಶೈಕ್ಷಣಿಕ, ಆರ್ಥಿಕ, ಆರೋಗ್ಯ, ಸಾಮಾಜಿಕ ಭದ್ರತೆ ಮತ್ತು ಪುನರ್ವಸತಿ ಸಂಬಂಧಿತ ಹಲವಾರು ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ವಿಕಲಚೇತನರ ಕುಂದುಕೊರತೆ ಸಭೆ ಕರೆಯುವಂತೆ ಕರ್ನಾಟಕ ರಾಜ್ಯ ವಿಕಲಚೇತನರ ಆರ್‌ಪಿಡಿ ಟಾಸ್ಕ್ ಫೋರ್ಸ್ ತಾಲೂಕ ಸಮಿತಿಯ ವತಿಯಿಂದ ತಹಶೀಲ್ದಾರ್ ಕಚೇರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಕಾಯ್ದೆ–2016 ಜಾರಿಗೆ ಬಂದ ನಂತರ, ವಿಕಲಚೇತನರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಅನೇಕ ಸುತ್ತೋಲೆಗಳನ್ನು ಹೊರಡಿಸಿದೆ. ಆದರೆ ಈ ಸುತ್ತೋಲೆಗಳನ್ನು ಸಮರ್ಪಕವಾಗಿ ಜಾರಿಗೆ ತರಲು ಕೆಳ ಹಂತದ ಅಧಿಕಾರಿಗಳು ವಿಫಲರಾಗಿದ್ದಾರೆ. ಇದರ ಪರಿಣಾಮವಾಗಿ ವಿಕಲಚೇತನರು ಸರ್ಕಾರದ ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದು, ಅವರ ಸಮಸ್ಯೆಗಳು ಇನ್ನೂ ಪರಿಹಾರವಾಗದೇ ಉಳಿದಿವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇದಲ್ಲದೆ ತಾಲೂಕಿನಲ್ಲಿ ವಿವಿಧ ಸಂದರ್ಭಗಳಲ್ಲಿ ವಿಕಲಚೇತನರ ಹಕ್ಕುಗಳು ಉಲ್ಲಂಘನೆಯಾಗುತ್ತಿರುವುದಾಗಿ ಆರೋಪಿಸಲಾಗಿದೆ. ಹೀಗಾಗಿ ತಹಶೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಆದಷ್ಟು ಶೀಘ್ರದಲ್ಲಿ ತಾಲೂಕ ಮಟ್ಟದ ವಿಕಲಚೇತನರ ಕುಂದುಕೊರತೆ ಸಭೆ ಆಯೋಜಿಸಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ವಿಕಲಚೇತನರ ಸಂಘದ ತಾಲೂಕು ಅಧ್ಯಕ್ಷ ನಾರಾಯಣಪ್ಪ ಆನಂದ್, ರಾಯಪ್ಪ ಮಲ್ಲೇಶ್, ಜಯಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.





