ಮಸ್ಕಿ | ಅಡುಗೆ ಸಹಾಯಕಿ ವಿವಾದ: 12 ದಿನ ಶಾಲೆಗೆ ಬಾರದ ಮಕ್ಕಳು

ರಾಯಚೂರು: ಅಡುಗೆ ಸಹಾಯಕಿಯ ಕುಟುಂಬ ಹಾಗೂ ಗ್ರಾಮಸ್ಥರ ನಡುವಿನ ಜಗಳದ ಪರಿಣಾಮ ತಮ್ಮ ಮಕ್ಕಳಿಗೆ 12 ದಿನಗಳ ಕಾಲ ಶಾಲೆಗೆ ಕಳುಹಿಸದಿರುವ ಘಟನೆ ಮಸ್ಕಿ ತಾಲೂಕಿನ ಎಂ.ರಾಮಲದಿನ್ನಿ ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಮಸ್ಕಿ ತಾಲೂಕಿನ ಎಂ.ರಾಮಲದಿನ್ನಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ಸಹಾಯಕಿಯಾಗಿ ಕೆಲಸ ಮಾಡುತ್ತಿರುವ ಶಂಕ್ರಮ್ಮ ಹಾಗೂ ಅವರ ಕುಟುಂಬ ಸದಸ್ಯರೊಂದಿಗೆ ಕೆಲ ದಿನಗಳ ಹಿಂದೆ ವೈಯಕ್ತಿಕ ಕಾರಣಕ್ಕೆ ಜಗಳವಾಗಿತ್ತು ಎನ್ನಲಾಗಿದೆ. ವೈಯಕ್ತಿಕ ಜಗಳದ ನೆಪವಾಗಿಟ್ಟುಕೊಂಡು ಅಡುಗೆ ಸಹಾಯಕಿ ತಮ್ಮ ಮಕ್ಕಳಿಗೆ ಗುಣಮಟ್ಟದ ಅಡುಗೆ ನೀಡಲು ಹಿಂಜರಿಯಬಹುದು, ಊಟದಲ್ಲಿ ಏನಾದರು ಬೆರೆಸಿ ಮಕ್ಕಳ ಆರೋಗ್ಯಕ್ಕೆ ಹಾಳು ಮಾಡಿ ದ್ವೇಷ ಸಾಧಿಸಬಹುದು ಎಂಬ ಉದ್ದೇಶದಿಂದ ಶಾಲೆಗೆ ತಮ್ಮ ಮಕ್ಕಳನ್ನು 12 ದಿನಗಳಿಂದ ಕಳುಹಿಸದಿರುವುದು ಬೆಳಕಿಗೆ ಬಂದಿದೆ.
ಕುಟುಂಬಸ್ಥರ ವೈಯಕ್ತಿಕ ಜಗಳ ಏನೇ ಇದ್ದರೂ ಮಕ್ಕಳ ಆಹಾರದ ಮೇಲೆ ಪರಿಣಾಮ ಬೀರುವಷ್ಟು ಅಡುಗೆ ಮಾಡುವಷ್ಟು ನೀಚ ಬುದ್ಧಿ ನನ್ನದಲ್ಲ. ಆದರೂ ಪಾಲಕರು ಯಾಕೆ ಮಕ್ಕಳನ್ನು ಶಾಲೆಗೆ ಕಳುಹಿಸಿಲ್ಲ ಎಂದು ಗೊತ್ತಾಗುತ್ತಿಲ್ಲ ಎಂದು ಅಡುಗೆ ಸಹಾಯಕಿ ಶಂಕ್ರಮ್ಮ ಅಳಲು ತೋಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಅಸ್ಪೃಶ್ಯತೆ (ಜಾತೀಯತೆ) ಆರೋಪ
ಶಂಕ್ರಮ್ಮ ಪರಿಶಿಷ್ಟ ಜಾತಿಯ ಛಲವಾದಿ ಸಮುದಾಯಕ್ಕೆ ಸೇರಿದ್ದು, ಛಲವಾದಿ ಸಮುದಾಯ ಹಾಗೂ ಪರಿಶಿಷ್ಟ ಪಂಗಡದ ಸಮುದಾಯದ ಕೆಲ ಮುಖಂಡರ ನಡುವೆ ಜಗಳ ನಡೆದಿತ್ತು. ಮಕ್ಕಳ ಪಾಲಕರು ಬಹುತೇಕ ಎಸ್‌ಟಿ ಸಮುದಾಯಕ್ಕೆ ಸೇರಿದ್ದು, ಬಿಸಿಯೂಟ ತಯಾರಿಸುವ ಶಂಕ್ರಮ್ಮ ಅವರ ಮೇಲೆ ಅನುಮಾನದಿಂದ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ. ಅವರನ್ನು ಬೇರೆಡೆ ವರ್ಗಾವಣೆ ಮಾಡಬೇಕು ಎಂದು ಪಟ್ಟು ಹಿಡಿದಿದ್ದರು ಎನ್ನಲಾಗಿದೆ.
ಶಾಲೆಯಲ್ಲಿ ವಿದ್ಯಾರ್ಥಿಗಳಿಲ್ಲದ ಕಾರಣ ಬೋಧನಾ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಶಿಕ್ಷಕರು ಪ್ರತಿದಿನ ಶಾಲೆಗೆ ಹಾಜರಾಗುತ್ತಿದ್ದರೂ ವಿದ್ಯಾರ್ಥಿಗಳಿಲ್ಲದೆ ತರಗತಿ ಕೊಠಡಿಗಳು ಖಾಲಿಯಾಗಿವೆ. ಸರ್ಕಾರದ ಮಹತ್ವಾಕಾಂಕ್ಷೆಯ ಬಿಸಿಯೂಟ ಯೋಜನೆಯೂ ಸ್ಥಗಿತಗೊಂಡಿದ್ದು, ಶಾಲೆಯ ಶೈಕ್ಷಣಿಕ ವಾತಾವರಣ ಸಂಪೂರ್ಣ ಹದಗೆಟ್ಟಿದೆ ಎಂದು ತಿಳಿದು ಬಂದಿದೆ.
ಪ್ರಕರಣದ ಗಂಭೀರತೆಯನ್ನು ಅರಿತ ಕ್ಷೇತ್ರ ಶಿಕ್ಷಣಾಧಿಕಾರಿ ನೇತೃತ್ವದಲ್ಲಿ ಗ್ರಾಮದಲ್ಲಿ ಸಭೆ ನಡೆಸಿ ಗ್ರಾಮಸ್ಥರು, ಪಾಲಕರು ಹಾಗೂ ಸಂಬಂಧಪಟ್ಟವರೊಂದಿಗೆ ಮಾತುಕತೆ ನಡೆಸಲಾಯಿತು. ತಾತ್ಕಾಲಿಕವಾಗಿ ಶಂಕ್ರಮ್ಮ ಅವರನ್ನು ಮಸ್ಕಿಯ ಹಾಲಾಪುರ ಶಾಲೆಗೆ ಡೆಪ್ಯುಟೇಶನ್ ಹಾಕಿ ಅಲ್ಲಿನ ಸಿಬ್ಬಂದಿಯನ್ನು ರಾಮಲದಿನ್ನಿ ಶಾಲೆಗೆ ವರ್ಗಾಯಿಸಿಕೊಂಡ ಕಾರಣ ಸೋಮವಾರ ಜೂನ್ 15ರಂದು ಶಾಲೆಗೆ ಮಕ್ಕಳನ್ನು ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.
ವಿವಾದಕ್ಕೆ ಗುರಿಯಾದ ಅಧಿಕಾರಿಗಳ ನಡೆ
ಜಗಳದ ನೆಪವಾಗಿಟ್ಟು ಅಡುಗೆ ಸಹಾಯಕಿ ಶಂಕ್ರಮ್ಮ ಪರಿಶಿಷ್ಟ ಜಾತಿಗೆ ಸೇರಿದವರು ಎಂಬ ಕಾರಣಕ್ಕೆ ಎಸ್‌ಟಿ ಸಮುದಾಯದ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸದಿದ್ದರೂ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಂಕ್ರಮ್ಮ ಅವರನ್ನು ಸ್ವಗ್ರಾಮವನ್ನು ಬಿಟ್ಟು ಬೇರೆ ಊರಿಗೆ ಕೆಲಸಕ್ಕೆ ಕಳುಹಿಸಿದ್ದು ಸರಿಯಲ್ಲ. ಇದು ಜಾತಿ ತಾರತಮ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಂ.ರಾಮಲದಿನ್ನಿ ಶಾಲೆಯ ವಿವಾದಕ್ಕೆ ಸಂಬಂಧಿಸಿದಂತೆ ಅಕ್ಷರ ದಾಸೋಹ ಅಧಿಕಾರಿ ಹಾಗೂ ಬಿಇಒ ಅವರಿಗೆ ಸೂಚನೆ ನೀಡಿ ಸಮಸ್ಯೆ ಪರಿಹಾರಕ್ಕೆ ನಿರ್ದೇಶನ ನೀಡಿದ್ದೇನೆ.
- ಮಲ್ಲಿಕಾರ್ಜುನ, ಸಾಕ್ಷರತೆ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು, ರಾಯಚೂರು.






