ಮಸ್ಕಿ | ಹಳ್ಳದಲ್ಲಿ ಸಿಕ್ಕಿಕೊಂಡ ಟ್ರ್ಯಾಕ್ಟರ್ : 15 ಮಂದಿಯ ರಕ್ಷಣೆ

ರಾಯಚೂರು : ಟ್ರ್ಯಾಕ್ಟರ್ ನಲ್ಲಿ ಚಾಲಕ ನೋರ್ವ ಸುಮಾರು 15 ಕ್ಕೂ ಹೆಚ್ಚು ಜನರನ್ನು ಕೂರಿಸಿಕೊಂಡು ಕೆಸರಿನ ರಸ್ತೆಯಲ್ಲಿ ಹೊಳೆಯೊಂದನ್ನು ದಾಟಲು ಮುಂದಾದ ಪರಿಣಾಮ ಹಳ್ಳದಲ್ಲಿ ಟ್ರಾಕ್ಟರ್ ಸಿಲುಕಿದ ಘಟನೆ ನಡೆದಿದ್ದು, 15 ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಎರೆಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮಳೆಯಿಂದಾಗಿ ಹಳ್ಳಗಳು ತುಂಬಿವೆ. ಮಸ್ಕಿ ಕ್ಷೇತ್ರದ ಬಳಗಾನೂರಿನ ಪಕ್ಕದಲ್ಲಿರುವ ಚಿಕ್ಕ ಉದ್ಬಾಳದಲ್ಲಿ ಬಸವಣ್ಣನ ದೇವಸ್ಥಾನಕ್ಕೆ ಭಕ್ತರು ದರ್ಶನ ಪಡೆಯಲು ನಾರಾಯಣನಗರ ಕ್ಯಾಂಪ್ ಮತ್ತು ಚಿಕ್ಕ ಉದ್ಬಾಳದ ಮಧ್ಯದಲ್ಲಿರುವ ಹಳ್ಳವನ್ನು ದಾಟಿ ಹೋಗುವಾಗ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಹಳ್ಳ ತುಂಬಿದರೂ ಚಾಲಕ ದುಸ್ಸಾಹಸ ಮಾಡಿ ಹಳ್ಳ ದಾಟುವಾಗ ಟ್ರಾಕ್ಟರ್ ಸಿಲುಕಿಕೊಂಡಿದೆ. ಓರ್ವ ಬಾಲಕನ ಕೈ ಬೆರಳು ಮುರಿದಿದ್ದು, ಉಳಿದಂತೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಮಳೆಗಾಲದಲ್ಲಿ ಹಳ್ಳ ತುಂಬಿ ಹರಿಯುವುದರಿಂದ ಭಕ್ತರು ದೇವಸ್ಥಾನಕ್ಕೆ ಹೋಗಬೇಕಾದರೆ ಪ್ರತಿ ವರ್ಷ ಹರಸಾಹಸ ಪಡಬೇಕಾಗುತ್ತದೆ.ಈ ಹಳ್ಳಕ್ಕೊಂದು ಸೇತುವೆ ನಿರ್ಮಾಣ ಮಾಡಿದರೆ ಭಕ್ತರಿಗೆ ಮತ್ತು ಸುತ್ತಲಿನ ರೈತರಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.





