ರಾಜ್ಯಾಧ್ಯಕ್ಷ, ಪಕ್ಷ ಕಟ್ಟಿದವರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ: ಶಾಸಕ ಮಾನಪ್ಪ

ರಾಯಚೂರು ಬಿಜೆಪಿ ಜಿಲ್ಲಾ ಕೋರ್ ಕಮಿಟಿ ಸಭೆ
ರಾಯಚೂರು: ಪಕ್ಷ ವಿರೋಧಿ ಹೇಳಿಕೆ ನೀಡುವವರ ವಿರುದ್ಧ ಹೈಕಮಾಂಡ್ ಗಮನಿಸಲಿದೆ. ರಾಜ್ಯಾಧ್ಯಕ್ಷರ ಹಾಗೂ ಪಕ್ಷ ಕಟ್ಟಿದವರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಇಲ್ಲಿನ ಪಕ್ಷದ ಕಚೇರಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ಕೋರ್ ಕಮಿಟಿ ಸಭೆಯ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪಕ್ಷದಲ್ಲಿ ಇತ್ತೀಚೆಗೆ ಕೆಲವರ ನೀಡುತ್ತಿರುವ ಹೇಳಿಕೆಗಳಿಂದಾಗಿ ಪ್ರತಿ ಜಿಲ್ಲೆಯ ಕಾರ್ಯಕರ್ತರು ಬೇಸರಗೊಳ್ಳುತ್ತಿದ್ದಾರೆ. ಬಿಜೆಪಿಯಲ್ಲಿ ಕೆಲವರು ಮನಬಂದಂತೆ ಹೇಳಿಕೆಗಳನ್ನು ಕೊಡುತ್ತಿದ್ದು, ಮೊದಲು ಅದನ್ನು ಬಂದ್ ಮಾಡಬೇಕು ಎಂದು ತಾಕೀತು ಮಾಡಿದರು.
ಪಕ್ಷದಲ್ಲಿನ ಆಂತರಿಕ ಸಂಘರ್ಷವನ್ನು ಬೇರೆ ಪಕ್ಷಗಳು ಲಾಭ ಪಡೆಯಬಾರದು. ಇಲ್ಲವಾದರೆ ಪಕ್ಷದಲ್ಲಿ ದೊಡ್ಡ ಸಮಸ್ಯೆ ಉದ್ಭವಿಸುತ್ತದೆ. ಒಗ್ಗಟ್ಟಿನಿಂದ ಪಕ್ಷ ಬಲಿಷ್ಠಪಡಿಸಬೇಕಿದೆ ಎಂದು ಹೇಳಿದರು.
ಪಕ್ಷ ಕಟ್ಟಿದವರ ಬಗ್ಗೆ ಹಾಗೂ ರಾಜ್ಯಾಧ್ಯಕ್ಷರ ಕುರಿತು ಮಾತನಾಡುವುದು, ಅವರನ್ನುನಿಂದಿಸುವುದು ಸರಿಯಲ್ಲ. ಮೊದಲು ಇದೆಲ್ಲವೂ ನಿಲ್ಲಬೇಕು. ಆ ನಿಟ್ಟಿನಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ನಾಯಕ ಕ್ರಮ ವಹಿಸುವಂತೆ ಒತ್ತಡ ಹೇರಲಾಗಿದೆ ಎಂದರು.
ಪಕ್ಷದ ಎಲ್ಲಾ ನಾಯಕರು,ಕಾರ್ಯಕರ್ತರು ಶಿಸ್ತು ಕಾಪಾಡಿಕೊಂಡು ನಡೆಯಬೇಕು ಎಂದು ಹೇಳಿದರು.







