ರಾಯಚೂರು: ಪಹಲ್ಗಾಮ್ ಉಗ್ರರ ದಾಳಿ ಖಂಡಿಸಿ ಸಿಪಿಎಂ ಪ್ರತಿಭಟನೆ

ರಾಯಚೂರು: ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರವಾದಿಗಳ ಕೃತ್ಯವನ್ನು ಖಂಡಿಸಿ ಸಿಪಿಎಂ ರಾಯಚೂರು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಸಿಪಿಎಂ ಮುಖಂಡರು, ಕಾರ್ಯಕರ್ತರು ಪಹಲ್ಗಾಮ್ ನಲ್ಲಿ ಜನಸಾಮಾನ್ಯರ ಮೇಲೆ ಉಗ್ರವಾದಿಗಳು ನಡೆಸಿದ ದಾಳಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಪ್ರತಿಭಟನಾನಿರತರು, ಕಾಶ್ಮೀರದಲ್ಲಿ ಉಗ್ರವಾದಿಗಳು ನಡೆಸಿದ ಹತ್ಯೆ ಖಂಡನೀಯ. 28 ಮಂದಿ ದಾಳಿಯಲ್ಲಿ ಜೀವತೆತ್ತಿದ್ದಾರೆ. ಇಡೀ ದೇಶವೇ ಆ ದುಃಖದಲ್ಲಿದೆ. ಆದರೆ ಈ ಮಧ್ಯೆ ಈ ದುಷ್ಕೃತ್ಯವನ್ನು ಒಂದು ಸಮುದಾಯದ ತಲೆಗೆ ಕಟ್ಟುವಂತಹ ಕುಟಿಲತೆ ನಡೆಯುತ್ತಿದೆ. ಇದು ಕೋಮು ವಿಚ್ಛಿದ್ರಕಾರ ಉದ್ದೇಶವನ್ನು ಹೊಂದಿದೆ. ತನ್ನ ಭದ್ರತಾ ಲೋಪವನ್ನು ಮುಚ್ಚಿಕೊಳ್ಳಲು ಕೇಂದ್ರ ಸರಕಾರವು ಈ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ಇದು ತೀವ್ರ ಖಂಡನಾರ್ಹ ಎಂದರು. ಕಾಶ್ಮೀರದ ಜನತೆಯು ಪ್ರವಾಸಿಗರನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಆದರೂ ಕೋಮುದ್ವೇಷ ಹಬ್ಬಿಸುವುದನ್ನು ಸಂಘ ಪರಿವಾರದ ಜನತೆ ನಿಲ್ಲಿಸಿಲ್ಲ. ಕಾಶ್ಮೀರದಲ್ಲಿ ಸಿಪಿಎಂ ಪಕ್ಷದ ಶಾಸಕರಾಗಿರುವ ಕಾ.ಯೂಸೂಫ್ ತಾರಿಗಾಮಿ ನೊಂದವರನ್ನು ಸಂತೈಸುವಲ್ಲಿ, ಶಾಂತಿ ಸೌಹಾರ್ದ ಕಾಪಾಡುವಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅವರ ಕುಟುಂಬದಲ್ಲಿ ಮೂವರು ಉಗ್ರಗಾಮಿಗಳಿಗೆ ಬಲಿಯಾದ ಹಿನ್ನೆಲೆಯಿದ್ದು, ಅವರು ನೋವು ಹೊಂದಿದ್ದಾರೆ. ಉಗ್ರವಾದ ಭಯೋತ್ಪಾದನೆಯ ವಿರುದ್ಧ ಸಿಪಿಎಂ ಪಕ್ಷ ನಿರಂತರ ಹೋರಾಟ ನಡೆಸುತ್ತಿದೆ ಎಂದರು.
ಇತ್ತೀಚೆಗೆ ನಡೆದಂತಹ ಈ ಘಟನೆಯನ್ನು ಮುಂದಿಟ್ಟು ಬಜರಂಗದಳ ಹಾಗೂ ಮತ್ತಿತರ ಕೋಮುವಾದಿ ಸಂಘಟನೆಗಳು ಶಾಂತಿ, ಸೌಹಾರ್ದಕ್ಕೆ ಭಂಗವುಂಟು ಮಾಡುವಂತೆ ನಡೆದುಕೊಂಡಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಕೆ.ಜಿ.ವಿರೇಶ, ಎಚ್.ಪದ್ಮಾ, ಡಿ.ಎಸ್.ಶರಣಬಸವ, ಶ್ರೀಧರ, ರವಿ, ಹನುಮಂತಪ್ಪ, ಇಂದ್ರಮ್ಮ, ಅಸ್ಮಾ, ಗೋಕಾರಮ್ಮ, ನಾಗರಾಜ, ಸರೋಜಮ್ಮ, ಮಲ್ಲೇಶ, ನರಸಮ್ಮ, ಮಹಾದೇವ, ಶಂಕ್ರಮ್ಮ ಸೇರಿ ಅನೇಕರು ಭಾಗವಹಿಸಿದ್ದರು.





