ರಾಯಚೂರು | ವಕ್ಫ್ ಬೋರ್ಡ್ ಪರ ತೀರ್ಪು ಹಿನ್ನೆಲೆಯಲ್ಲಿ ಹಾಶ್ಮಿಯ ಕಾಂಪೌಂಡ್ ಜಮೀನು ಅತಿಕ್ರಮಣ ತೆರವು: ನಿವಾಸಿಗಳಿಂದ ಪ್ರತಿಭಟನೆ, ಧರಣಿ

ರಾಯಚೂರು, ಮೇ 21: ನಗರದ ಹೃದಯ ಭಾಗವಾದ ಅಂಬೇಡ್ಕರ್ ವೃತ್ತದ ಮುಂದಿರುವ ವಕ್ಫ್ ಮಂಡಳಿಗೆ ಸಂಬಂಧಿಸಿದ ಹಾಶ್ಮಿಯ ಕಾಂಪೌಂಡ್ ಜಮೀನು ಅತಿಕ್ರಮಣದ ಬಗ್ಗೆ ಕಲಬುರಗಿಯ ನ್ಯಾಯ ಮಂಡಳಿಯಲ್ಲಿ ವಾದ-ವಿವಾದ ನಡೆದು ಕೊನೆಗೆ ನ್ಯಾಯಾಲಯವು ಜಿಲ್ಲಾ ವಕ್ಫ್ ಮಂಡಳಿ ಪರವಾಗಿ ತೀರ್ಪು ನೀಡಿದೆ. ಈ ಹಿನ್ನಲೆಯಲ್ಲಿ ಇಂದು ತಾಲೂಕ ಆಡಳಿತ, ಮಹಾನಗರ ಪಾಲಿಕೆ, ಜಿಲ್ಲಾ ವಕ್ಫ್ ಸಲಹಾ ಸಮಿತಿ ನೇತೃತ್ವದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ನೊಂದಿಗೆ ಅತಿಕ್ರಮಿತ ಸ್ಥಳದಲ್ಲಿದ್ದ ರಸ್ತೆ ಬದಿಯಲ್ಲಿನ ಅಂಗಡಿ-ಮುಂಗಟ್ಟುಗಳ ತೆರವು ಕಾರ್ಯಚರಣೆ ಆರಂಭಿಸಿದೆ.
ಅತಿಕ್ರಮಣ ತೆರವಿನ ಬಗ್ಗೆ ಮಾಹಿತಿ ತಿಳಿದ ಸ್ಥಳೀಯ ನಿವಾಸಿಗಳು ಕುಟುಂಬ ಸಮೇತ ಹಾಶ್ಮಿಯ ಕಾಂಪೌಂಡ್ ಮುಖ್ಯದ್ವಾರದ ಬಳಿ ಪ್ರತಿಭಟನಾ ಧರಣಿ ಆರಂಭಿಸಿ ತೆರವಿಗೆ ವಿರೋಧ ವ್ಯಕ್ತಪಡಿಸಿ ಘೋಷಣೆ ಕೂಗಾಲಾರಂಭಿಸಿದರು.
ಪೊಲೀಸ್ ಅಧಿಕಾರಿಗಳು ನಿವಾಸಿಗಳ ಮನವೊಲಿಸುವ ಮೂಲಕ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು,ತಹಶೀಲ್ದಾರ್ರೊಂದಿಗೆ ಚರ್ಚಿಸುವಂತೆ ಸಲಹೆ ನೀಡಿ ಕಳುಹಿಸಿದರು. ಧರಣಿನಿರತರು ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರನ್ನು ಭೇಟಿಯಾಗಲು ಹೋದ ತಕ್ಷಣ ಇತ್ತ ಮೊದಲಿಗೆ ವಿದ್ಯುತ್ ಸಂಪರ್ಕವನ್ನು ಜೆಸ್ಕಾಂ ಸಿಬ್ಬಂದಿ ಕಡಿತಗೊಳಿಸಿದರು. ನಂತರ ಸಿಬ್ಬಂದಿ ಜೆಸಿಬಿಗಳ ಮೂಲಕ ತೆರವು ಕಾರ್ಯಾಚರಣೆ ಆರಂಭಿಸಿದರು.
ಹಾಶ್ಮಿಯ ಕಂಪೌಡ್ನ ಜಮೀನು ಸುಮಾರು 2.5 ರಿಂದ 3 ಎಕರೆ ಇದೆ. ಈ ಜಾಗದಲ್ಲಿ ಅನೇಕ ವರ್ಷಗಳಿಂದ ಅನೇಕರು ವ್ಯಾಪಾರದ ಅಂಗಡಿಗಳು ಮತ್ತು ಮನೆಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಈ ಜಾಗಕ್ಕೆ ಸಂಬಂಧಿಸಿದಂತೆ 1979ರಿಂದ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿತು. ಕೊನೆಗೆ ಕಲಬುರಗಿಯ ವಕ್ಫ್ ನ್ಯಾಯ ಮಂಡಳಿಯಲ್ಲಿ ಅನೇಕ ವರ್ಷಗಳ ಕಾಲ ವಾದ-ವಿವಾದ ನಡೆದು ಕೊನೆಗೆ ನ್ಯಾಯಾಲಯವು ಜಿಲ್ಲಾ ವಕ್ಫ್ ಬೋರ್ಡ್ ಪರವಾಗಿ ದಿ 08-04-2025ರಂದು ವಕ್ಫ್ ಬೋರ್ಡ್ ಪರ ತೀರ್ಪು ತೀರ್ಪು ನೀಡಿ ಈ ಭೂಮಿ ವಕ್ಫ್ ಮಂಡಳಿಗೆ ಸೇರಿದೆ ಎಂದು ಆದೇಶ ನೀಡಿದೆ.
ಈ ಹಿನ್ನಲೆಯಲ್ಲಿ ಮೇ 17ರಂದು ತಾಲೂಕ ಆಡಳಿತದ ಅಧಿಕಾರಿಗಳು, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರು ಮತ್ತು ಅಧಿಕಾರಿಗಳು ಹಾಶ್ಮಿಯ ಕಂಪೌಂಡ್ ಸ್ಥಳಕ್ಕೆ ಭೇಟಿ ನೀಡಿ ಈ ಜಾಗದಲ್ಲಿ ಅತಿಕ್ರಮಿಸಿ ಮನೆ , ಮತ್ತು ಅಂಗಡಿ, ಮಳಿಗೆಗಳನ್ನು ನಿರ್ಮಾಣ ಮಾಡಿಕೊಂಡವರ ಮೂರು ದಿನದೊಳಗೆ ಖಾಲಿ ಮಾಡಬೇಕು ಸೂಚನೆ ನೀಡಿದ್ದರು. ಒಂದು ವೇಳೆ ಖಾಲಿ ಮಾಡದಿದ್ದರೆ ಜಿಲ್ಲಾಡಳಿತ ದಿಂದ ಮನೆ, ಅಂಗಡಿ ,ಮಳಿಗೆಗಳನ್ನು ತೆರವುಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದರು.
ಅದರಂತೆ ಇಂದು ಭಾರೀ ಪೊಲೀಸ್ ಬಂದೋಬಸ್ತ್ ನೊಂದಿಗೆ ತೆರವು ಕಾರ್ಯಾಚರಣೆ ನಡೆಯುತ್ತಿದೆ.
ಸ್ಥಳಕ್ಕೆ ಸಹಾಯಕ ಆಯುಕ್ತರು, ತಹಶೀಲ್ದಾರ್ ಶರ್ಮ, ಡಿವೈಎಸ್ಪಿ, ಮಹಾನಗರ ಪಾಲಿಕೆ ಉಪಾಯುಕ್ತ ಗುರುಸಿದ್ದಯ್ಯ ಹಿರೇಮಠ, ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಮೌಲಾನಾ ಫರೀದ್ ಖಾನ್, ಅಧಿಕಾರಿ ಸಲೀಂ ಪಾಷಾ ಉಪಸ್ಥಿತರಿದ್ದರು.







