ಅಕ್ರಮ ಗಣಿಗಾರಿಕೆ | ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ವಿಶೇಷ ನ್ಯಾಯಾಲಯ ಸ್ಥಾಪನೆ: ಸಿಎಂ ಸಿದ್ದರಾಮಯ್ಯ

ರಾಯಚೂರು: ರಾಜ್ಯದಲ್ಲಿ ಬಾಕಿ ಉಳಿದಿರುವ ಗಣಿ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ವಿಶೇಷ ನ್ಯಾಯಾಲಯ ಸ್ಥಾಪಿಸಲು ಎಚ್.ಕೆ.ಪಾಟೀಲ ನೇತೃತ್ವದ ಸಮಿತಿಯು ಸರಕಾರಕ್ಕೆ ಮನವಿ ಸಲ್ಲಿಸಿದೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಯಚೂರು ತಾಲೂಕಿನ ಯರಗೇರಾ ಸಮೀಪದ ಆದಿಕವಿ ಮಹರ್ಷಿ ವಾಲ್ಮೀಕಿ ವುವಿ ಆವರಣದಲ್ಲಿನ ಹೆಲಿಪ್ಯಾಡ್ ನಲ್ಲಿಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡುತ್ತಿದ್ದರು.
ಹಿಂದೆ ಅಕ್ರಮ ಗಣಿಗಾರಿಕೆ ವಿರುದ್ಧ ಸದನದಲ್ಲಿ ಧ್ವನಿ ಎತ್ತಿದಾಗ ಬಿಜೆಪಿಯ ಶಾಸಕರು ಬಳ್ಳಾರಿಗೆ ಬಂದು ನೋಡಿ ಎಂದು ಸವಾಲು ಹಾಕಿದ್ದರು. ಆ ವೇಳೆ ಕಾಂಗ್ರೆಸ್ ಪಕ್ಷ ಪಾದಯಾತ್ರೆಯ ಮೂಲಕ ಬಳ್ಳಾರಿಯಲ್ಲಿ ಪ್ರತಿಭಟನೆ ನಡೆಸಿತ್ತು ಎಂದು ತಿಳಿಸಿದರು.
ಅಕ್ರಮ ಗಣಿಗಾರಿಕೆ ಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಮನವಿ ಸಲ್ಲಿಸಿದ್ದರು. ದಾಖಲೆಗಳನ್ನು ಸಲ್ಲಿಸಿದ್ದರು, ಈ ಎಲ್ಲಾ ಪ್ರಕರಣಗಳು ಗಂಭೀರವಾಗಿ ಪರಿಗಣಿಸಲಾಗಿದೆ. ಅಕ್ರಮ ಗಣಿಗಾರಿಕೆಯಿಂದ ಸರ್ಕಾರಕ್ಕೆ ಆಗಿರುವ ನಷ್ಟ ತಪ್ಪಿಸಲು ಸರ್ಕಾರ ವಿಶೇಷ ನ್ಯಾಯಾಲಯದ ಮೂಲಕ ಪ್ರಕರಣಗಳ ಇತ್ಯಾರ್ಥಕ್ಕೆ ಪ್ರಯತ್ನಿಸಲಿದೆ ಎಂದು ತಿಳಿಸಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಪ್ರಧಾನಿ ಮೋದಿ ಅವರಿಗೆ ಹತ್ತಿರದಲ್ಲಿ ಇದ್ದಾರೆ. ರಾಯಚೂರಿಗೆ ಏಮ್ಸ್ ಮಂಜೂರು ಮಾಡಲು ಪ್ರಯತ್ನಿಸಬಹುದಾಗಿದೆ. ಅದನ್ನು ಬಿಟ್ಟು ಸಮಿತಿ ವರದಿ ಸಲ್ಲಿಸಬೇಕು ಎಂದು ಕಾಲಹರಣ ಮಾಡುತ್ತಿದ್ದಾರೆ ಎಂದು ಸಿಎಂ ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಬಿಜೆಪಿಯ ಒಬ್ಬ ಶಾಸಕರೂ ಮಾತನಾಡಿಲ್ಲ, ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಗಾಗಿ ರಾಜ್ಯ ಸರ್ಕಾರ ಪ್ರತಿವರ್ಷ 5 ಸಾವಿರ ಕೋಟಿ ರೂ. ಕೊಡುತ್ತದೆ. ಸಂವಿಧಾನ ಬದ್ಧವಾಗಿ ಕೇಂದ್ರ ಸರ್ಕಾರವೂ ಶೇ.50ರಷ್ಟು ಪಾಲು ಕೊಡಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಶಾಸಕರಾದ ರಾಜು ಕಾಗೆ ಸೇರಿದಂತೆ ಕೆಲವರು ಮಾಧ್ಯಮಗಳ ಮೂಲಕ ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಈಗಷ್ಟೇ ಗೊತ್ತಾಗಿದೆ ಎಲ್ಲಾ ಶಾಸಕರನ್ನೂ ಕರೆದು ಅವರೊಂದಿಗೆ ಚರ್ಚಿಸಿ ಅವರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.







