ಅಣು ವಿದ್ಯುತ್ ಸ್ಥಾವರವೇ ಬೇಡ: ರಾಯಚೂರು ಜಿಲ್ಲಾ ನಾಗರಿಕ ವೇದಿಕೆ

ರಾಯಚೂರು: ಈಗಾಗಲೇ ಎರಡು ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಿಂದ ನಲುಗಿಹೋದ ರಾಯಚೂರು ಜಿಲ್ಲೆಯಲ್ಲಿ ಒಳಾಂತರ ಪ್ರದೇಶದಲ್ಲಿ ಅಣು ವಿದ್ಯುತ್ ಸ್ಥಾವರ ಘಟಕ ಸ್ಥಾಪಿಸುವ ಯಾವುದೇ ಪ್ರಯತ್ನವನ್ನು ತೀವ್ರವಾಗಿ ಖಂಡಿಸುವುದಾಗಿ ರಾಯಚೂರು ಜಿಲ್ಲಾ ನಾಗರಿಕ ವೇದಿಕೆ ಸರ್ವಾನುಮತದಿಂದ ತೀರ್ಮಾನಿಸಿದೆ. “ಅಣು ವಿದ್ಯುತ್ ಸ್ಥಾವರ ನಮಗೆ ಬೇಡವೇ ಬೇಡ” ಎಂಬ ಒಕ್ಕೊರಲಿನ ಘೋಷಣೆಯೊಂದಿಗೆ ಸಭೆ ಅಂತ್ಯಗೊಂಡಿತು.
ಸೋಮವಾರ ಸಂಜೆ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸಭಾಂಗಣದಲ್ಲಿ ವಿವಿಧ ಸಂಘ–ಸಂಸ್ಥೆಗಳ ಮುಖಂಡರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹೋರಾಟಗಾರರು ಹಾಗೂ ಪ್ರಗತಿಪರರು ಮಾತನಾಡಿದರು. ಇತ್ತೀಚೆಗೆ ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರಕ್ಕೆ (ಆರ್‌ಟಿಪಿಎಸ್) ಭೇಟಿ ನೀಡಿ ಸದ್ದಿಲ್ಲದೆ ಸ್ಥಳ ಪರಿಶೀಲನೆ ನಡೆಸಿರುವ ಬಗ್ಗೆ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು.
ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ತೆರೆಮರೆಯಲ್ಲೇ ತಯಾರಿ ನಡೆಯುತ್ತಿರುವುದು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಸಭೆಯಲ್ಲಿ ಗಂಭೀರ ಆಕ್ರೋಶ ವ್ಯಕ್ತವಾಯಿತು. “ಕೇಂದ್ರ ತಂಡದ ಭೇಟಿ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ” ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ್ ಪಾಟೀಲ್ ಹೇಳಿಕೆ ನೀಡಿರುವುದನ್ನು ಉಲ್ಲೇಖಿಸಿದ ಸಭಿಕರು, “ಜಿಲ್ಲೆಯಲ್ಲಿ ಅಣು ವಿದ್ಯುತ್ ಸ್ಥಾವರ ಘಟಕ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ” ಎಂಬ ಅವರ ಸ್ಪಷ್ಟ ನಿಲುವನ್ನು ಸ್ವಾಗತಿಸಿದರು. ಆದರೆ ಆರ್‌ಟಿಪಿಎಸ್ ಆವರಣದಲ್ಲಿ ಸ್ಥಳ ಪರಿಶೀಲನೆಗೆ ಅವಕಾಶ ನೀಡಿರುವುದೇ ದೊಡ್ಡ ತಪ್ಪಾಗಿರಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.
ಸಭೆಯ ತೀರ್ಮಾನಗಳು:
1. ಒಳಾಂತರ ಪ್ರದೇಶದಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪಿಸುವ ಹುನ್ನಾರವನ್ನು ತೀವ್ರವಾಗಿ ಖಂಡಿಸಲಾಗುತ್ತದೆ.
2. ರಾಯಚೂರು ಜನತೆಗೆ ಅಣು ವಿದ್ಯುತ್ ಸ್ಥಾವರ ಘಟಕ ಬೇಡವೇ ಬೇಡ.
3. ಇನ್ನುಮುಂದೆ ಯಾವುದೇ ಕಾರಣಕ್ಕೂ ಜಿಲ್ಲಾಡಳಿತ ಹಾಗೂ ಆರ್‌ಟಿಪಿಎಸ್ ಅಧಿಕಾರಿಗಳು ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಸಂಬಂಧಿಸಿದಂತೆ ಕೇಂದ್ರ ತಂಡಕ್ಕೆ ಸ್ಥಳ ಪರಿಶೀಲನೆಗೆ ಅವಕಾಶ ನೀಡಬಾರದು.
4. ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ವಿದ್ಯುತ್ ಉತ್ಪಾದನೆಗೆ ಪರ್ಯಾಯವಾಗಿ ಸೌರಶಕ್ತಿ ಆಧಾರಿತ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಪ್ರಾಧಾನ್ಯ ನೀಡಬೇಕು.
5. ಸಭೆಯಲ್ಲಿ ಸರ್ವಾನುಮತದಿಂದ ತೆಗೆದುಕೊಂಡ ತೀರ್ಮಾನಗಳ ಕುರಿತು ಮುಖ್ಯಮಂತ್ರಿ, ಪ್ರಧಾನಮಂತ್ರಿ ಹಾಗೂ ಸಂಬಂಧಿಸಿದ ಕೇಂದ್ರ ಸಚಿವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ ಸಲ್ಲಿಸಲು ತೀರ್ಮಾನಿಸಲಾಯಿತು.
ಮನವಿ ಪತ್ರ ಸಲ್ಲಿಕೆ ಕಾರ್ಯಕ್ರಮವು ಜ. 29, 2026 (ಗುರುವಾರ) ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ, ಮಿನಿವಿಧಾನಸೌಧದಲ್ಲಿ ನಡೆಯಲಿದ್ದು, ಈ ಸಂದರ್ಭದಲ್ಲಿ ರಾಯಚೂರು ನಗರದ ಸರ್ವ ಸಂಘ–ಸಂಸ್ಥೆಗಳು, ಪರಿಸರ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ರಾಯಚೂರು ಜಿಲ್ಲಾ ನಾಗರಿಕ ವೇದಿಕೆ ಮನವಿ ಮಾಡಿದೆ.
ಸಭೆಯಲ್ಲಿ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಅಧ್ಯಕ್ಷ ಡಾ. ಶ್ರೀಶೈಲೇಶ್ ಅಮರ್ಖೇಡ್, ರಾಯಚೂರು ಜಿಲ್ಲಾ ನಾಗರಿಕ ವೇದಿಕೆಯ ಡಾ. ಬಸವರಾಜ್ ಕಳಸ, ವಕೀಲ ಎಸ್. ಮಾರಪ್ಪ, ಅಶೋಕ್ ಕುಮಾರ್ ಜೈನ್, ಜಾನ್ ವೆಸ್ಲಿ, ರೈತ ಸಂಘದ ಚಾಮರಸ ಪಾಟೀಲ್, ಮಲ್ಲಣ್ಣ ದಿನ್ನಿ, ಅನಿತಾ ಮಂತ್ರಿ, ನಿವೇದಿತಾ, ಆರ್‌ಟಿಪಿಎಸ್ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಅಯ್ಯಣ್ಣ ಮಹಾಮನಿ ಸೇರಿದಂತೆ ಅನೇಕ ಪರಿಸರ, ಪ್ರಗತಿಪರ, ಕನ್ನಡಪರ, ದಲಿತಪರ ಸಂಘಟನೆಗಳ ಮುಖಂಡರು ಹಾಗೂ ಶಿಕ್ಷಣ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.







