ಸಿಂಧನೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನಾಮ ನಿರ್ದೇಶನ : ಮುಂದುವರೆದ ಕಾಂಗ್ರೆಸ್ ಬಣಗಳ ನಡುವಿನ ಕಿತ್ತಾಟ
ಪಕ್ಷಕ್ಕಾಗಿ ದುಡಿದಿದ್ದೇವೆ ಪ್ರತಿಫಲವಾಗಿ ಅಧಿಕಾರ ಸಿಕ್ಕಿದೆ, ನಾವು ಶಾಸಕರ ಜೀತದಾಳುಗಳಲ್ಲ: ವೆಂಕಟೇಶ ರಾಗಲಪರ್ವಿ

ರಾಯಚೂರು(ಸಿಂಧನೂರು): ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ದುಡಿದಿದ್ದೇವೆ ಇದಕ್ಕೆ ಪ್ರತಿಫಲವಾಗಿ ಅಧಿಕಾರ ಸಿಕ್ಕಿದೆ. ಬೊಟ್ಟು ಮಾಡುವ ಅವಶ್ಯಕತೆಯಿಲ್ಲ, ನಾವು ಶಾಸಕರ ಜೀತದಾಳುಗಳಲ್ಲ ಎಂದು ಕಾಂಗ್ರೆಸ್ ಪಕ್ಷದ ಎಸ್.ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ನಾಯಕ ರಾಗಲಪರ್ವಿ ತಿಳಿಸಿದರು.
ಸಿಂಧನೂರು ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಶಾಸಕ ಹಂಪನಗೌಡರ ಜೊತೆ ಗುರುತಿಸಿಕೊಂಡು ಪಕ್ಷಕ್ಕಾಗಿ ದುಡಿದಿದ್ದೇನೆ, ಹಾಗೆ ಅವರ ಗೆಲುವಿಗಾಗಿ ಸಹ ಶ್ರಮಿಸಿದ್ದೇನೆ, ರಾಗಲಪರ್ವಿ ಹೋಬಳಿಯಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ ಕಾರಣ ಪಕ್ಷದ ವತಿಯಿಂದ ನನ್ನ ಪತ್ನಿಗೆ ಮೀಸಲಾತಿ ಆಧಾರದ ಮೇಲೆ ಟಿಕೆಟ್ ಸಿಕ್ಕಿ ಗೆಲುವು ಸಾಧಿಸಿದ್ದೇವೆ. ಮೀಸಲಾತಿ ಮೇಲೆ ನನ್ನ ಪತ್ನಿ ತಾಲೂಕು ಪಂಚಾಯತ್ ಅಧ್ಯಕ್ಷರಾದರು. ಧಡೇಸೂಗೂರು ಯುನುಸ್ ಪಾಷಾ ಅವರ ತಾಯಿಯು ಸಹ ಅಧ್ಯಕ್ಷರಾಗಿ ಕೆಲಸ ಮಾಡಿದರು. ನಾವು ಪಕ್ಷಕ್ಕಾಗಿ ದುಡಿದಿದ್ದೇವೆ ಅಧಿಕಾರ ಅನುಭವಿಸಿದ್ದೇವೆ ಎಂದು ಶಾಸಕ ಹಂಪನಗೌಡ ಬೆಂಬಲಿಗರಿಗೆ ತಿರುಗೇಟು ನೀಡಿದರು.
ಪಕ್ಷಕ್ಕಾಗಿ ದುಡಿದ ಕಾರಣಕ್ಕೆ ಪಕ್ಷ ನಮ್ಮನ್ನು ಗುರುತಿಸಿದೆ ಹೊರತು ನಾವು ಅವರಂತೆ ಪಕ್ಷ ವಿರೋಧಿ ಚಟುವಟಿಕೆ ಕೆಲಸ ಮಾಡಿಲ್ಲ. ಹಿಂದೆ ನಡೆದ ಎಲ್ಲಾ ಲೋಕಸಭಾ ಚುನಾವಣೆಗಳಲ್ಲಿ ಶಾಸಕರು ಮತ್ತು ಅವರ ಬೆಂಬಲಿಗರು ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡಿದ್ದು ಗೊತ್ತಿದೆ ಎಂದು ಅವರು ಆರೋಪಿಸಿದರು.
ಈ ಹಿಂದೆ ಹಂಪನಗೌಡರ ಜೊತೆಗೆ ಇದ್ದೆ, ಈಗ ಬಸನಗೌಡ ಬಾದರ್ಲಿಯವರ ಜೊತೆಗೆ ಇದ್ದೇನೆ, ಇದರಲ್ಲಿ ತಪ್ಪೇನಿದೆ. ಅವರು ಕೂಡ ಕಾಂಗ್ರೆಸ್ ಪಕ್ಷದವರಲ್ಲವೇ? ನಾನು ಎಲ್ಲಿದ್ದರು ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡುವೆ ಹೊರತು ಎಂದು ಕೂಡ ಪಕ್ಷ ವಿರೋಧಿ ಕೆಲಸವನ್ನು ಮಾಡಿಲ್ಲ. ನಾವೇನು ಸಾಯುವ ತನಕ ಹಂಪನಗೌಡರ ಜೊತೆ ಜೀತ ಮಾಡಿಕೊಂಡೆ ಇರಬೇಕಾ? ಅವರು ಹೇಳಿದಂತೆ ಕೇಳಬೇಕಾ? ಅವರ ಹತ್ತಿರ ನಮಗೆ ಸರಿ ಕಾಣಿಸಲಿಲ್ಲ. ಬಸನಗೌಡ ಬಾದರ್ಲಿಯವರ ಬೆಂಬಲಿಗನಾದೆ, ಇಲ್ಲಿ ನನಗೆ ಸರಿ ಕಾಣದಿದ್ದರೆ ಬೇರೆ ಕಡೆ ಹೋಗುತ್ತೇನೆ ಇದು ನನ್ನ ವೈಯಕ್ತಿಕ ಸ್ವಾತಂತ್ರ್ಯ ಎಂದರು.
ಸರ್ಕಾರದ ವಿವಿಧ ನೇಮಕಾತಿ ವಿಚಾರದಲ್ಲಿ ಶಾಸಕ ಹಂಪನಗೌಡರು ತಲೆ ಕೆಡಿಸಿಕೊಳ್ಳದೆ ಸುಮ್ಮನೆ ಇದ್ದರು. ಬಸನಗೌಡರು ತಮ್ಮ ಬೆಂಬಲಿಗರ ನಾಮ ನಿರ್ದೇಶನ ಮಾಡುವಂತೆ ಸರ್ಕಾರಕ್ಕೆ ಪತ್ರ ನೀಡಿದ ಮೇಲೆಯೇ ಹಂಪನಗೌಡರು ಹೋರಾಡಿ ತಮ್ಮ ಬೆಂಬಲಿಗರಿಗೆ ನಾಮ ನಿರ್ದೇಶನ ಮಾಡಿಸಿದರು. ಬಸನಗೌಡ ಬಾದರ್ಲಿ ಪತ್ರ ಕೊಡದೆ ಇದ್ದರೆ, ಇಲ್ಲಿಯ ತನಕ ಯಾವುದೇ ನಾಮ ನಿರ್ದೇಶನವು ಕೂಡ ಆಗುತ್ತಿರಲಿಲ್ಲ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಶಿವಕುಮಾರ ಜವಳಿ, ಶರಣಯ್ಯಸ್ವಾಮಿ ಕೋಟೆ, ಯೂನೀಷ್ ಪಾಷಾ ಧಡೇಸೂಗೂರು, ದಾದಪೀರ್, ಖಾಜಾ ಹುಸೇನ್ ರೌಡಕುಂದ, ಅಮರೇಶ ಗಿರಿಜಾಲಿ, ಯಂಕನಗೌಡ ಗೀಣೀವಾರ, ವೀರರಾಜ, ಹಬೀಬ್, ಹೊನ್ನನಗೌಡ ಬೆಳಗುರ್ಕಿ, ವೀರೇಶ ಉಪ್ಪಲದೊಡ್ಡಿ, ಹನುಮೇಶ್ ಕರ್ನಿ, ಸೇರಿದಂತೆ ಅನೇಕರಿದ್ದರು.
ಸುಡಾ ನಾಮ ನಿರ್ದೇಶನದಲ್ಲಿ ಶಾಸಕರು ತಮ್ಮ ಸಹೋದರನ ಮಗ ಬಾಬುಗೌಡರನ್ನು ಬಿಟ್ಟು ಬೇರೆ ಯಾರಿಗಾದರೂ ನಾಮ ನಿರ್ದೇಶನ ಮಾಡಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತರನ್ನು ಬಿಟ್ಟು, ತಮ್ಮ ಮನೆಯ ಸದಸ್ಯ ಬಾಬುಗೌಡರನ್ನೇ ನಾಮ ನಿರ್ದೇಶನ ಮಾಡಿದ್ದಕ್ಕೆ ನಮ್ಮ ವಿರೋಧವಿದೆ ಅಷ್ಟೆ, ಜೊತೆಗಿರುವ ನರೇಂದ್ರನಾಥ ಯಾವಾಗ ಪಕ್ಷದ ಧ್ವಜ ಹಿಡಿದು ಪಕ್ಷ ಕಟ್ಟಿದ್ದಾರೆ ಹೇಳಲಿ ಎಂದು ತಿಳಿಸಿದರು.