ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ರಾಯಚೂರು ಜಿಲ್ಲೆಯಲ್ಲಿ ಶೇ. 86.02ರಷ್ಟು ಮತದಾನ

ರಾಯಚೂರು: ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನವು ಜಿಲ್ಲೆಯಲ್ಲಿ ಶುಕ್ರವಾರ ಶಾಂತಿಯುತವಾಗಿ ನಡೆಯಿತು. ಜಿಲ್ಲೆಯ ಏಳು ತಾಲ್ಲೂಕುಗಳಲ್ಲಿ ಸ್ಥಾಪಿಸಲಾಗಿದ್ದ 16 ಮತಗಟ್ಟೆಗಳಲ್ಲಿ ಮತದಾರರು ಉತ್ಸಾಹದಿಂದ ಮತ ಚಲಾಯಿಸಿದರು. ಜಿಲ್ಲೆಯಲ್ಲಿ ಒಟ್ಟು ಶೇ. 86.02ರಷ್ಟು ಮತದಾನವಾಗಿದೆ ಎಂದು ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಪೂವಿತಾ ಎಸ್. ತಿಳಿಸಿದರು.
ಬೆಳಗ್ಗೆ 8 ಗಂಟೆಗೆ ಮತದಾನ ಪ್ರಾರಂಭವಾಗುತ್ತಿದ್ದಂತೆ ಮತದಾರರು ಒಬ್ಬೊಬ್ಬರಾಗಿ ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾಯಿಸಲಾರಂಭಿಸಿದರು. ಬೆಳಗ್ಗೆ 10 ಗಂಟೆಯ ನಂತರ ಮತದಾನ ಚುರುಕುಗೊಂಡಿತು. ರಾಯಚೂರು, ದೇವದುರ್ಗ, ಸಿರವಾರ, ಮಾನ್ವಿ, ಮಸ್ಕಿ, ಲಿಂಗಸುಗೂರು ಹಾಗೂ ಸಿಂಧನೂರು ತಾಲ್ಲೂಕುಗಳಲ್ಲಿ ಮತದಾನ ಪ್ರಕ್ರಿಯೆ ಸುಗಮವಾಗಿ ನಡೆಯಿತು.
ರಾಯಚೂರಿನ ಎಪಿಎಂಸಿ ಕಟ್ಟಡ, ಶ್ರೀ ಶಾರದಾ ಶಾಲೆ, ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು, ರಾಯಚೂರು ತಾಲ್ಲೂಕು ಪಂಚಾಯಿತಿ ಕಟ್ಟಡ ಹಾಗೂ ಜಿಎಚ್‌ಪಿಎಸ್ ಯರಮರಸ್ ಕ್ಯಾಂಪ್‌ನಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಮಾನ್ವಿಯ ಟಿಎಂಸಿ ಕಚೇರಿ, ಸಿರವಾರದ ಸರ್ಕಾರಿ ಪದವಿಪೂರ್ವ ಕಾಲೇಜು, ದೇವದುರ್ಗದ ತಹಶೀಲ್ದಾರ್ ಕಚೇರಿ, ಗಬ್ಬೂರು ಗ್ರಾಮ ಪಂಚಾಯಿತಿ, ಜಾಲಹಳ್ಳಿ ಗ್ರಾಮ ಪಂಚಾಯಿತಿ ಹಾಗೂ ಅರಕೇರಾ ಗ್ರಾಮ ಪಂಚಾಯಿತಿಗಳಲ್ಲಿಯೂ ಮತದಾನ ನಡೆಯಿತು. ಲಿಂಗಸುಗೂರಿನ ತಹಶೀಲ್ದಾರ್ ಕಚೇರಿ ಮತ್ತು ಹಟ್ಟಿ ಜೂನಿಯರ್ ಕಾಲೇಜು, ಸಿಂಧನೂರಿನ ತಹಶೀಲ್ದಾರ್ ಕಚೇರಿ ಹಾಗೂ ಮಸ್ಕಿಯ ಪುರಸಭೆ ಕಚೇರಿಯಲ್ಲಿ ಸ್ಥಾಪಿಸಿದ್ದ ಮತಗಟ್ಟೆಗಳಲ್ಲಿಯೂ ಮತದಾರರು ತಮ್ಮ ಹಕ್ಕು ಚಲಾಯಿಸಿದರು.
ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಭೇಟಿ :
ಬೆಳಗ್ಗೆ 8 ಗಂಟೆಯ ಸುಮಾರಿಗೆ ಜಿಲ್ಲಾಧಿಕಾರಿ ಪೂವಿತಾ ಎಸ್. ಅವರು ರಾಯಚೂರಿನ ಎಪಿಎಂಸಿ ಕಟ್ಟಡ, ಜಿಎಚ್‌ಪಿಎಸ್ ಯರಮರಸ್ ಕ್ಯಾಂಪ್, ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಶ್ರೀ ಶಾರದಾ ಕನ್ಯಾಪೀಠ ಮಾಧ್ಯಮಿಕ ಪಾಠಶಾಲೆಯ ಮತಗಟ್ಟೆಗಳಿಗೆ ಭೇಟಿ ನೀಡಿ, ಮತದಾನದ ವ್ಯವಸ್ಥೆಯನ್ನು ಪರಿಶೀಲಿಸಿದರು. ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ, ರಾಯಚೂರು ಡಿವೈಎಸ್ಪಿ ಶಾಂತಮೂರ್ತಿ, ರಾಯಚೂರು ಸಿಪಿಐ ಉಮೇಶ್ ಕಾಂಬಳೆ ಸೇರಿದಂತೆ ಚುನಾವಣಾಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.
ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಪೂವಿತಾ ಎಸ್. ಮಾತನಾಡಿ, ಮತದಾನವು ನಿಗದಿತ ಸಮಯದಂತೆ ಬೆಳಗ್ಗೆ 8 ಗಂಟೆಗೆ ಆರಂಭವಾಗಿದೆ. ಎಲ್ಲ ಮತದಾನ ತಂಡಗಳು ಹಾಗೂ ಸೂಕ್ಷ್ಮ ವೀಕ್ಷಕರು ಸ್ಥಳದಲ್ಲಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದೆ ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.
ಮತದಾನವು ಸಂಜೆ 4 ಗಂಟೆಗೆ ಮುಕ್ತಾಯಗೊಳ್ಳಲಿದ್ದು, ಆ ನಂತರ ಯಾವುದೇ ಕಾರಣಕ್ಕೂ ಮತ ಚಲಾಯಿಸಲು ಅವಕಾಶವಿರುವುದಿಲ್ಲ. ಆದ್ದರಿಂದ ಮತದಾರರು ಸಂಜೆ 4 ಗಂಟೆಯೊಳಗೆ ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಬೇಕು ಎಂದು ಮನವಿ ಮಾಡಿದರು. ಗುರುವಾರ ಸಂಜೆ ದೇವದುರ್ಗ ಸೇರಿದಂತೆ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಲಾಗಿದ್ದು, ಚುನಾವಣಾ ಕಾರ್ಯದ ಮೇಲ್ವಿಚಾರಣೆ ನಡೆಸುವಂತೆ ಆಯಾ ಉಪವಿಭಾಗಗಳ ಸಹಾಯಕ ಆಯುಕ್ತರಿಗೆ ಸೂಚಿಸಲಾಗಿದೆ ಎಂದರು.
ಜಿಲ್ಲೆಯ ಎಲ್ಲ 16 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದ್ದು, ಅದನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಪ್ರತಿ ಮತದಾನ ತಂಡದಲ್ಲಿ ನಾಲ್ವರು ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸೂಕ್ಷ್ಮ ವೀಕ್ಷಕರನ್ನೂ ನೇಮಿಸಲಾಗಿದೆ. ರಾಯಚೂರು ನಗರದ ಸ್ಟೇಷನ್ ರಸ್ತೆ ಹಾಗೂ ಸಿಂಧನೂರಿನಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರಿರುವ ಮತಗಟ್ಟೆಗಳಲ್ಲಿ ಜನಸಂದಣಿ ಅಥವಾ ಇತರ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಹೆಚ್ಚುವರಿ ಮೀಸಲು ತಂಡಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
3,178 ಪುರುಷರು, 2,224 ಮಹಿಳಾ ಮತದಾರರು :
ಅಕ್ಟೋಬರ್ 23ರಂದು ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಮತದಾನ ಸುಗಮವಾಗಿ ನಡೆದಿದ್ದು, ಒಟ್ಟು ಶೇ. 86.02ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಪೂವಿತಾ ಎಸ್. ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 3,178 ಪುರುಷ ಮತದಾರರ ಪೈಕಿ 2,787 ಮಂದಿ ಹಾಗೂ 2,224 ಮಹಿಳಾ ಮತದಾರರ ಪೈಕಿ 1,860 ಮಂದಿ ಮತ ಚಲಾಯಿಸಿದ್ದಾರೆ. ಈ ಮೂಲಕ ಜಿಲ್ಲೆಯ ಏಳು ತಾಲ್ಲೂಕುಗಳ 16 ಮತದಾನ ಕೇಂದ್ರಗಳಲ್ಲಿ ಒಟ್ಟು 5,402 ಮತದಾರರ ಪೈಕಿ 4,647 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ಅವರು ತಿಳಿಸಿದರು.






