ಚಿಕಲಪರ್ವಿ, ಚಿಕ್ಕಮಂಚಾಲೆ ಬಳಿ ಬ್ರಿಡ್ಜ್ ಕಂ ಬ್ಯಾರೇಜ್ ಯೋಜನೆ: ಆಂಧ್ರಪ್ರದೇಶದ ಸಚಿವರೊಂದಿಗೆ ಭೋಸರಾಜು ಸಭೆ

ರಾಯಚೂರು: ಕರ್ನಾಟಕ ಸರಕಾರದ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ಅವರು ಆಂಧ್ರಪ್ರದೇಶದ ನೀರಾವರಿ ಇಲಾಖೆ ಸಚಿವರಾದ ನಿಮ್ಮಲ ರಾಮನಾಯ್ಡು ಹಾಗೂ ಕೈಗಾರಿಕಾ ಸಚಿವರಾದ ಟಿ.ಜಿ ಭರತ್ ಅವರೊಂದಿಗೆ ಮಹತ್ವದ ಸಭೆ ನಡೆಸಿದರು.
ಸಭೆಯಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿ ಪ್ರದೇಶದ ರೈತರ ಹಿತದೃಷ್ಟಿಯಿಂದ ತುಂಗಾಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲು ಯೋಜಿಸಲಾಗಿರುವ ಬ್ರಿಡ್ಜ್ ಕಂ ಬ್ಯಾರೇಜ್ ಯೋಜನೆಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು. ಚಿಕಲಪರ್ವಿ ಮತ್ತು ಚಿಕ್ಕಮಂಚಾಲೆ ಹತ್ತಿರ ತುಂಗಾಭದ್ರಾ ನದಿಯ ಹರಿವಿನಲ್ಲಿ ಈ ಬ್ಯಾರೇಜ್‌ಗಳನ್ನು ನಿರ್ಮಿಸುವ ಯೋಜನೆಯ ಬಗ್ಗೆ ಪ್ರಸ್ತಾಪಿಸಲಾಯಿತು.
ಈ ಯೋಜನೆಗಳು ಅನುಷ್ಠಾನಗೊಂಡರೆ ಉಭಯ ರಾಜ್ಯಗಳ ಸಾವಿರಾರು ರೈತರಿಗೆ ಕೃಷಿ ಚಟುವಟಿಕೆಗಳಿಗಾಗಿ ಹೆಚ್ಚುವರಿ ನೀರು ದೊರೆಯಲಿದೆ. ಇದರಿಂದ ರೈತರಿಗೆ ಅಪಾರ ಅನುಕೂಲವಾಗಲಿದೆ. ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಅಗತ್ಯ ಸಹಕಾರ ನೀಡುವಂತೆ ಸಚಿವರಾದ ಭೋಸರಾಜು ಅವರು ಆಂಧ್ರಪ್ರದೇಶದ ಸಚಿವರಲ್ಲಿ ಮನವಿ ಸಲ್ಲಿಸಿದರು.
ಈ ಮನವಿಗೆ ಆಂಧ್ರಪ್ರದೇಶದ ಸಚಿವರುಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದ ಮುಂದಿನ ಕ್ರಮಗಳು ಮತ್ತು ಸಹಕಾರದ ಕುರಿತು ಕರ್ನಾಟಕ ಸರಕಾರಕ್ಕೆ ಶೀಘ್ರದಲ್ಲಿಯೇ ಅಧಿಕೃತವಾಗಿ ಮಾಹಿತಿ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಸಚಿವರಾದ ಎನ್ ಎಸ್ ಭೋಸರಾಜು ತಿಳಿಸಿದ್ದಾರೆ.







