ವಿರೋಧ ಪಕ್ಷದವರು ಸುಳ್ಳು ಪ್ರಚಾರ ಮಾಡಿ ರಾಜ್ಯದ ಜನರ ದಾರಿ ತಪ್ಪಿಸುತ್ತಿದ್ದಾರೆ : ಸಿಎಂ ಸಿದ್ದರಾಮಯ್ಯ
936 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ, ಬುಡಕಟ್ಟು ಉತ್ಸವ, 371ಜೆ ದಶಮಾನೋತ್ಸವ ಕಾರ್ಯಕ್ರಮ

PC | X @siddaramaiah
ರಾಯಚೂರು : ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಕ್ರಮ ನಡೆಯುತ್ತಿಲ್ಲ ಎಂದು ವಿರೋಧ ಪಕ್ಷದವರು ಸುಳ್ಳು ಪ್ರಚಾರ ಮಾಡಿ ರಾಜ್ಯದ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರೇ ನೀವು ಇನ್ನೂ ರಾಜಕೀಯದಲ್ಲಿ ಸಣ್ಣವರು, ನಿಮಗೆ ಇನ್ನೂ ಅನುಭವ ಆಗಬೇಕು, ಬಾಯಿಗೆ ಬಂದ ಹಾಗೆ ಮಾತಾಡಬಾರದು, ಇದರಿಂದ ನಿಮ್ಮ ಗೌರವ ಕಡಿಮೆ ಆಗುತ್ತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ರಾಯಚೂರು ತಾಲೂಕಿನ ಯರಗೇರಾ ಗ್ರಾಮದ ಹೊರವಲಯದಲ್ಲಿ ಆಯೋಜಿಸಿದ್ದ 936 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ, ಬುಡಕಟ್ಟು ಉತ್ಸವ, 371 (ಜೆ) ದಶಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಿಜೆಪಿ, ಜೆಡಿಎಸ್ ನಾಯಕರು ಸುಳ್ಳು ಹೇಳುತ್ತಿದ್ದಾರೆ, ಅವರ ಮಾತುಗಳನ್ನು ಕೇಳಬೇಡಿ. ಬಿಜೆಪಿ ಅಧಿಕಾರದಲ್ಲಿದ್ದಾಗ ಜನರ ಕಷ್ಟಕ್ಕೆ ಸ್ಪಂದಿಸಿಲ್ಲ. ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ 936 ಕೋಟಿ ರೂ. ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮಾಡಲಾಗಿದೆ. ಇದೇ ರೀತಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ನಾವು ನುಡಿದಂತೆ ನಡೆಯುತ್ತಿದ್ದೇವೆ ಎಂದು ತಿಳಿಸಿದರು.
15ನೇ ಹಣಕಾಸು ಆಯೋಗದಲ್ಲಿ ನಮಗೆ ಅನ್ಯಾಯವಾಗಿದೆ. ನಾನು ಎರಡು ಬಅರಿ ಮನವಿ ಪತ್ರ ನೀಡಿದ್ದೇನೆ. ಪ್ರಧಾನಿ ಹಾಗೂ ಹಣಕಾಸು ಮಂತ್ರಿಯನ್ನು ಭೇಟಿ ಮಾಡಿ, ನಮಗೆ ಆದ ಅನ್ಯಾಯವನ್ನು 16ನೇ ಹಣಕಾಸಿನ ಅಯೋಗದಲ್ಲಿ ಸರಿಮಾಡಲು ಹೇಳುತ್ತೇನೆ ಎಂದರು.
ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರು ಉತ್ತಮವಾಗಿ ಕೆಲಸ ಮಾಡ್ತಿದಾರೆ. ಮುಂದೆನೂ ಅವರನ್ನು ಗೆಲ್ಲಿಸಬೇಕು ಎಂದಾಗ ಅಭಿಮಾನಿಗಳು ದದ್ದಲ್ ಅವರನ್ನು ಉಸ್ತುವಾರಿ ಸಚಿವರಾಗಿ ಮಾಡಬೇಕು ಎಂದು ಕೂಗಿದರು.
ಕಾರ್ಯಕ್ರಮದಲ್ಲಿ ಎಚ್.ಕೆ.ಪಾಟೀಲ್, ಸತೀಶ್ ಜಾರಕಿಹೊಳಿ, ಶಿವರಾಜ ತಂಗಡಗಿ, ಶರಣಪ್ಪ ದರ್ಶಾನಾಪೂರ, ಎನ್.ಎಸ್.ಬೋಸರಾಜು, ಅಜಯ್ಸಿಂಗ್, ಕೆ.ಜೆ.ಜಾರ್ಜ್, ಡಾ.ಶರಣಪ್ರಕಾಶ್ ಪಾಟೀಲ್, ಶರಣಬಸಪ್ಪ ದರ್ಶನಾಪೂರ, ಎಂ.ಸಿ.ಸುಧಾಕರ್, ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಸಂಸದ ಜಿ.ಕುಮಾರ ನಾಯಕ, ವಿಧಾನ ಪರಿಷತ್ ಸದಸ್ಯರಾದ ಎ.ವಸಂತಕುಮಾರ, ಶರಣೇಗೌಡ ಬಯ್ಯಾಪುರ, ಶಾಸಕ ಹಂಪನಗೌಡ ಬಾದರ್ಲಿ ಮತ್ತಿತರರು ಇದ್ದರು.







