ದೇಶದಲ್ಲಿ ವಿರೋಧ ಪಕ್ಷಗಳು ಅರಾಜಕತೆ ಸೃಷ್ಠಿಸುತ್ತಿವೆ: ಪಿ.ರಾಜೀವ್

ರಾಯಚೂರು: ದೇಶವು ಆಪತ್ತಿನ ಸಂದರ್ಭವನ್ನು ಎದುರಿಸುತ್ತಿರುವಾಗ, ವಿರೋಧ ಪಕ್ಷಗಳು ಅರಾಜಕತೆ ಸೃಷ್ಟಿಸುವ ಪ್ರಯತ್ನದಲ್ಲಿವೆ. ಆದರೆ ಬಿಜೆಪಿ ಕಾರ್ಯಕರ್ತರು ದೇಶ ಕಟ್ಟುವ ಕೆಲಸ ಮುಂಚೂಣಿಯಲ್ಲಿರಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಹೇಳಿದರು.
ನಗರದ ಹೊರವಲಯದ ರಾಯಲ್ ಫೋರ್ಟ್ ಹೊಟೆಲ್ ಆವರಣದಲ್ಲಿ ನಡೆದ ರಾಯಚೂರು ಗ್ರಾಮೀಣ ಮಂಡಲ ನೂತನ ಅಧ್ಯಕ್ಷ ಮಹಾಂತೇಶ ಮುಕ್ತಿ ಹಾಗೂ ಪ್ರಧಾನ ಕಾರ್ಯದರ್ಶಿ ನವೀನ್ ಕುರ್ಡಿ ಮತ್ತು ಇತರ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿಯಲ್ಲಿ ಜವಾಬ್ದಾರಿ ಎಂದರೆ ಅದು ಅಧಿಕಾರಕ್ಕಾಗಿ ಅಲ್ಲ, ಸಮಾಜದ ನೆಮ್ಮದಿಗಾಗಿ ದುಡಿಯುವ ಪಕ್ಷ. ಆದರೆ ಕಾಂಗ್ರೆಸ್ 75 ವರ್ಷಗಳ ಆಡಳಿತದಲ್ಲಿ ಪ್ರಜಾಪ್ರಭುತ್ವವನ್ನು ಹಾಳುಮಾಡಿ, ಕುಟುಂಬ ರಾಜಕಾರಣ ನಡೆಸಿದೆ ಎಂದು ದೂರಿದರು.
ಪಶ್ಚಿಮ ಬಂಗಾಳ, ಕೇರಳ, ಜಮ್ಮು-ಕಾಶ್ಮೀರದಂತಹ ರಾಜ್ಯಗಳ ಸವಾಲುಗಳು, ದೇಶದ ಸಮಗ್ರತೆಗೆ ಬೆದರಿಕೆಯಾದ ಸಂದರ್ಭದಲ್ಲೂ ಬಿಜೆಪಿ ಮಾತ್ರ ದೇಶ ಕಟ್ಟುವ ರಾಜಕೀಯ ಮಾಡುತ್ತದೆ. ಮತ್ತೊಬ್ಬರ ಮನೆ ಕಾಯುವುದಿಲ್ಲ, ದೇಶ ಕಟ್ಟುತ್ತದೆ, ಎಂದರು.
ಭೀಮಾ ನದಿತೀರ ಪ್ರವಾಹದಲ್ಲಿ ಜನ ಸಂಕಷ್ಟದಲ್ಲಿದ್ದಾಗ ಕಾಂಗ್ರೆಸ್ ಸರ್ಕಾರ ಮಾನವೀಯತೆಯನ್ನು ಮರೆತಿದೆ. ಕೇಂದ್ರದತ್ತ ಬೆರಳು ತೋರಿಸುವ ಬದಲು, 2009ರಲ್ಲಿ ಯಡಿಯೂರಪ್ಪ ಅವರು ಮಾಡಿದಂತೆ ತಕ್ಷಣ ನೆರವು ನೀಡಬೇಕು ಎಂದು ಸಲಹೆ ನೀಡಿದರು.
ಮಾಜಿ ವಿಧಾನಪರಿಷತ್ ಸದಸ್ಯ ಎನ್. ಶಂಕ್ರಪ್ಪ, ಶಾಸಕ ಡಾ.ಶಿವರಾಜ ಪಾಟೀಲ್, ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್, ನೂತನ ಅಧ್ಯಕ್ಷ ಮಹಾಂತೇಶ ಮುಕ್ತಿ, ನೂತನ ಪ್ರಧಾನ ಕಾರ್ಯದರ್ಶಿ ಜಿ.ಎಚ್. ನವೀನಕುಮಾರ್ ಕುರ್ಡಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಮಾಜಿ ಸಂಸದರು ರಾಜಾ ಅಮರೇಶ್ವರ ನಾಯಕ, ಬಿ.ವಿ. ನಾಯಕ, ಮಾಜಿ ಶಾಸಕರಾದ ಬಸನಗೌಡ ಬ್ಯಾಗವಾಟ್, ಗಂಗಾಧರ ನಾಯಕ, ದೇವದುರ್ಗದ ಅಧ್ಯಕ್ಷ ಶರಣಬಸವ ಪಾಟೀಲ, ಮುಖಂಡರಾದ ಜಗದೀಶ ವಕೀಲ, ಶಂಕರರೆಡ್ಡಿ, ಸುಲೋಚನಾ, ಸಿದ್ದನಗೌಡ ನೆಲಹಾಳ್, ಅಚ್ಯುತ್ ರೆಡ್ಡಿ, ರವೀಂದ್ರ ಜಲ್ದಾರ ಸೇರಿದಂತೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.







