ಪೆಟ್ರೋಲ್ ಕೊರತೆ ಆತಂಕ : ಲಿಂಗಸುಗೂರಿನಲ್ಲಿ ಬಂಕ್ಗಳ ಮುಂದೆ ವಾಹನಗಳ ಸಾಲು

Photo Credit : PTI
ಲಿಂಗಸುಗೂರು : ಮಧ್ಯಪ್ರಾಚ್ಯ ರಾಷ್ಟ್ರಗಳ ಯುದ್ಧದ ಪರಿಣಾಮ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಉಂಟಾಗಲಿದ್ದು, ಇಂಧನ ದರ ಏರಿಕೆಯಾಗಲಿದೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಹಿನ್ನೆಲೆ ವಾಹನ ಸವಾರರು ಪೆಟ್ರೋಲ್ ಬಂಕ್ಗಳತ್ತ ಮುಗಿಬಿದ್ದ ಘಟನೆ ಲಿಂಗಸುಗೂರು ಪಟ್ಟಣದಲ್ಲಿ ಕಂಡುಬಂದಿದೆ.
ಪಟ್ಟಣದ ಬಸ್ ನಿಲ್ದಾಣದ ಸಮೀಪದ ಪೆಟ್ರೋಲ್ ಬಂಕ್ನಲ್ಲಿ ಸಂಜೆ ವೇಳೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕ್ಯಾನ್ಗಳನ್ನು ಹಿಡಿದು ಸರದಿ ಸಾಲಿನಲ್ಲಿ ನಿಂತು ಪೆಟ್ರೋಲ್ ಹಾಗೂ ಡೀಸೆಲ್ ತುಂಬಿಸಿಕೊಳ್ಳಲು ಹರಸಾಹಸಪಟ್ಟರು.
ಸುಳ್ಳು ಸುದ್ದಿಯನ್ನು ನಂಬಿದ ಹಲವರು 2ರಿಂದ 3 ಕ್ಯಾನ್ಗಳನ್ನು ಹಿಡಿದುಕೊಂಡು ಗಂಟೆಗಟ್ಟಲೆ ಬಂಕ್ ಮುಂದೆ ಕಾಯುತ್ತಿದ್ದು, ಇದರಿಂದ ಬಂಕ್ ಸಿಬ್ಬಂದಿಗೆ ಜನರನ್ನು ನಿಯಂತ್ರಿಸುವುದು ಕಷ್ಟಕರವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಆಹಾರ ನಿರೀಕ್ಷಕ ರಾಮಕೃಷ್ಣ, ಜಿಲ್ಲಾಡಳಿತದ ಸ್ಪಷ್ಟ ಆದೇಶದಂತೆ ಕ್ಯಾನ್ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ತುಂಬಿಸಬಾರದು. ಈ ಬಗ್ಗೆ ಬಂಕ್ ಮಾಲೀಕರಿಗೆ ಸೂಚನೆ ನೀಡಲಾಗುವುದು. ನಿಯಮ ಉಲ್ಲಂಘಿಸಿದರೆ ತಹಶೀಲ್ದಾರರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದ್ದಾರೆ.






