ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ಬಡ್ತಿ, ನೇಮಕ ಕೂಡಲೇ ಮಾಡಿ : ಶಾಸಕ ಶರಣಗೌಡ ಕಂದಕೂರು

ಶರಣಗೌಡ ಕಂದಕೂರು,ಮಧು ಬಂಗಾರಪ್ಪ
ಯಾದಗಿರಿ: ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಶಿಕ್ಷಕರ ಬಡ್ತಿ ಹಾಗೂ ನೇಮಕ ಮತ್ತು ಹೊಸ ಕಂದಾಯ ತಾಲೂಕುಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆರಂಭಿಸುವಂತೆಯೇ ಗುರುಮಠಕಲ್ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ರಾಜ್ಯದ ಶಾಲಾ ಮತ್ತು ಸಾಕ್ಷರತಾ ಶಿಕ್ಷಣ ಇಲಾಖೆ ಸಚಿವ ಮಧು ಬಂಗಾರಪ್ಪ ಅವರಿಗೆ ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿರುವ ಶಾಸಕರು, ಕೆಕೆ ಭಾಗದ ಶೈಕ್ಷಣಿಕ ಗುಣಮಟ್ಟ ಕುಸಿಯಲು ಹಲವಾರು ಕಾರಣಗಳಲ್ಲಿ ಪ್ರಮುಖವಾಗಿ ಶಿಕ್ಷಕರ ಕೊರತೆಯೂ ಒಂದು. ಕೆಕೆ ಭಾಗದ ಸರ್ಕಾರಿ ಪ್ರೌಢ ಶಾಲೆಗಳಿಗೆ ಮಂಜೂರು ಆಗಿರುವ 11,793 ಹುದ್ದೆಗಳಲ್ಲಿ 4,107 ಹುದ್ದೆಗಳು ಖಾಲಿ ಇವೆ. ಅಲ್ಲದೆ, ಈ ಏಳು ಜಿಲ್ಲೆಗಳ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮಂಜುರಾಗಿರುವ 45,431 ಹುದ್ದೆಗಳಲ್ಲಿ 17,274 ಹುದ್ದೆಗಳು ಅಂದರೇ ಶೇ. 40 ರಷ್ಟು ಹುದ್ದೆಗಳು ಖಾಲಿ ಇವೆ.
ಯಾದಗಿರಿ ಜಿಲ್ಲೆಯಲ್ಲಿಯೇ ಶೇ.50ರಷ್ಟು ಹುದ್ದೆಗಳು ಖಾಲಿ ಇವೆ. ಹೀಗಾದರೇ ಗುಣಮಟ್ಟದ ಶಿಕ್ಷಣ ಮತ್ತು ಉತ್ತಮ ಫಲಿತಾಂಶ ನಿರೀಕ್ಷಿಸುವುದು ಮರಳು ಗಾಡಿನಲ್ಲಿ ನೀರು ಬಯಸಿದಂತೆಯೇ ಸರಿ ಎಂದು ಅವರು ಮನವಿಯಲ್ಲಿ ವಿವರಿಸಿದ್ದಾರೆ.
ನೇರ ನೇಮಕಾತಿ ಮೂಲಕ ಭರ್ತಿ ಮಾಡಬೇಕಾದ 3,313 ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ಕೋರಿ ಈಗಾಗಲೇ ಅಪರ ಆಯುಕ್ತರು ಕಳೆದ ಮಾ.14 ರಂದು ಸರ್ಕಾರಕ್ಕೆ ಪತ್ರ ಬರೆದಿದ್ದು, ಅದನ್ನು ಸಹ ಇತ್ಯರ್ಥಗೊಳಿಸಬೇಕೆಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡುವಂತೆಯೇ ಸಚಿವರನ್ನು ಶಾಸಕ ಕಂದಕೂರು ಒತ್ತಾಯಿಸಿದ್ದಾರೆ.
ಶೈಕ್ಣಣಿಕ ಕಾರ್ಯ ಚಟುವಟಿಕೆಗಳು ಸರಳವಾಗಿ ಮತ್ತು ತ್ವರಿತ ಗತಿಯಲ್ಲಿ ನಡೆಯಲು ಗುರುಮಠಕಲ್ ಹೊಸ ಕಂದಾಯ ತಾಲೂಕಿನಲ್ಲಿ ನೂತನ ಬಿಇಓ ಕಚೇರಿ ಪ್ರಾರಂಭಿಸಲು ಸಂಬಂಧಪಟ್ಟ ಉನ್ನತ ಅಧಿಕಾರಿಗಳಿಗೆ ಸೂಚಿಸಬೇಕೆಂದು ಶಾಸಕರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಕೆಕೆ ಭಾಗದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಒತ್ತು ನೀಡಲಿ :
ಜಿಲ್ಲೆಯಲ್ಲಿ ಕಳೆದ ಅನೇಕ ವರ್ಷಗಳಿಂದ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ಇದಕ್ಕೆ ಹಲವಾರು ಕಾರಣಗಳು ಇವೆ. ಇದರಿಂದಾಗಿ ಫಲಿತಾಂಶದಲ್ಲಿ ನಾವು ಕೊನೆ ಸ್ಥಾನದಲ್ಲಿ ಇದ್ದೇವೆ. ಇದಕ್ಕೆ ನಿಖರ ಕಾರಣ ಹುಡುಕಿ ಅಗತ್ಯ ಸೌಲಭ್ಯಗಳು ನೀಡಬೇಕೆಂಬ ನಿಟ್ಟಿನಲ್ಲಿ ಇಂದು ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿರುವೆ.
-ಶರಣಗೌಡ ಕಂದಕೂರು, ಶಾಸಕರು, ಗುರುಮಠಕಲ್ ಮತಕ್ಷೇತ್ರ