Sindhanur | ಸಂವಾದ ಕಾರ್ಯಕ್ರಮದಲ್ಲಿ ಎಂಎಲ್ಸಿಗೆ ಮಾತನಾಡಲು ಅವಕಾಶ ನೀಡದ್ದಕ್ಕೆ ಆಕ್ರೋಶ: ಡಿಪೋ ವ್ಯವಸ್ಥಾಪಕರ ವಿರುದ್ಧ ಪ್ರತಿಭಟನೆ

ಸಿಂಧನೂರು: ನಗರದ ಬಸ್ ನಿಲ್ದಾಣದಲ್ಲಿ ಸೋಮವಾರ ಆಯೋಜಿಸಿದ್ದ ವಿದ್ಯಾರ್ಥಿಗಳೊಂದಿಗೆ ಶಾಸಕರ ಸಂವಾದ ಕಾರ್ಯಕ್ರಮದಲ್ಲಿ ಹೈಡ್ರಾಮ ನಡೆದಿದ್ದು, ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ರಾಜ್ಯ ಸರ್ಕಾರ ಹಾಗೂ ಸಾರಿಗೆ ನಿಗಮದಿಂದ ಶಾಸಕರ ಅನುದಾನದಲ್ಲಿ ವಿಶೇಷ ಬಸ್ ಸೌಕರ್ಯ ಒದಗಿಸುವ ಉದ್ದೇಶದಿಂದ ಸೋಮವಾರ 14 ಬಸ್ ಗಳಿಗೆ ಚಾಲನೆ ಹಾಗೂ ವಿದ್ಯಾರ್ಥಿಗಳೊಂದಿಗೆ ಶಾಸಕರ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು, ಈ ಕಾರ್ಯಕ್ರಮದಲ್ಲಿ ಸ್ಥಳೀಯರೇ ಆದ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಅವರಿಗೆ ಮಾತನಾಡಲು ಅವಕಾಶ ನೀಡಿಲ್ಲ ಎಂದು ಅವರ ಬೆಂಬಲಿಗರು ಆಕ್ರೋಶಗೊಂಡು ಡಿಪೋ ಮ್ಯಾನೇಜರ್ ವಿರುದ್ಧ ಅಸಮಾಧಾನ ತಗೊಂಡು ವಾಗ್ವಾದಕ್ಕಿಳಿದಿದ್ದಾರೆ.
ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗಾಗಿಯೇ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಹಾಗೂ ವಿಧಾನ ಪರಿಷತ್ ಶಾಸಕ ಬಸನಗೌಡ ಬಾದರ್ಲಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ಸಂವಾದ ನಡೆದ ಮೇಲೆ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿದರು. ನಂತರ ಶಾಸಕರು ಬಸ್ ಗಳಿಗೆ ಚಾಲನೆ ನೀಡಲು ವೇದಿಕೆಯಿಂದ ಕೆಳಗಿಳಿದರು.
ಕಾರ್ಯಕ್ರಮಕ್ಕೆ ಅಧಿಕೃತವಾಗಿ ವಿಧಾನ ಪರಿಷತ್ ಸದಸ್ಯರನ್ನು ಅಹ್ವಾನಿಸಿ ವೇದಿಕೆಯಲ್ಲಿ ಮಾತನಾಡಲು ಅವಕಾಶ ನೀಡದೇ ಡಿಪೋ ಮ್ಯಾನೇಜರ್ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಬಸನಗೌಡ ಬಾದರ್ಲಿ ಬೆಂಬಲಿಗರು ಡಿಪೋ ಮ್ಯಾನೇಜರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ಡಿಪೋ ಎದುರುಗಡೆ ಏಕಾಏಕಿ ಪ್ರತಿಭಟನೆ ನಡೆಸಿದರು.
ಕೆಲಕಾಲ ವಾಗ್ವಾದ ನಡೆದು ಡಿಪೋ ಮ್ಯಾನೇಜರ್ ವಿರುದ್ಧ ಘೋಷಣೆ ಕೂಗಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ಬಳಿಕ ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ಪರಿಸ್ಥಿತಿ ತಿಳಿಗೊಳಿಸಿದರು.







