ಲಿಂಗಸುಗೂರಿಗೆ ಮಂಜೂರಾಗಿದ್ದ ಜಿಲ್ಲಾಸ್ಪತ್ರೆಯನ್ನು ಸಿಂಧನೂರಿಗೆ ಸ್ಥಳಾಂತರಿಸಿದನ್ನು ವಿರೋಧಿಸಿ ಪ್ರತಿಭಟನೆ
ಬಂದ್ ಗೆ ಉತ್ತಮ ಪ್ರತಿಕ್ರಿಯೆ

ರಾಯಚೂರು: ಲಿಂಗಸುಗೂರು ತಾಲೂಕಿಗೆ ಮಂಜೂರಾಗಿದ್ದ 200 ಹಾಸಿಗೆಯ ಜಿಲ್ಲಾಸ್ಪತ್ರೆಯನ್ನು ಸಿಂಧನೂರಿಗೆ ಸ್ಥಳಾಂತರ ಮಾಡಿದ್ದನ್ನು ಖಂಡಿಸಿ ಲಿಂಗಸುಗೂರು ಅಭಿವೃದ್ಧಿ ಹೋರಾಟ ಸಮಿತಿ ಕರೆ ನೀಡಿದ್ದ ಲಿಂಗಸುಗೂರು ಬಂದ್ ಹೋರಾಟಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಲಿಂಗಸುಗೂರು ಪಟ್ಟಣದ ಶಾಲಾ ಕಾಲೇಜುಗಳು, ಔಷಧಿ ಅಂಗಡಿಗಳು, ಆಸ್ಪತ್ರೆಗಳು, ಬ್ಯಾಂಕ್ ಗಳು ಹೊರತು ಪಡಿಸಿ, ವ್ಯಾಪಾರ ವಹಿವಾಟು ಸಂಪೂರ್ಣ ಬಂದ್ ಮಾಡಲಾಗಿತ್ತು. ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಹೋರಾಟದಲ್ಲಿ ಭಾಗವಹಿಸಿದ್ದರು.
ಬಂದ್ ಅಂಗವಾಗಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಸಾರಿಗೆ ಸಂಸ್ಥೆಯ ಬಸ್ ಗಳು ರಸ್ತೆಗೆ ಇಳಿಯಲಿಲ್ಲ, ವಿವಿಧ ಗ್ರಾಮ ಹಾಗೂ ಪಟ್ಟಣಕ್ಕೆ ಹೋಗುವ ಪ್ರಯಾಣಿಕರು ಬಸ್ ಗಳಿಲ್ಲದೆ ಕೆಲಕಾಲ ಪರದಾಡಿದರು. ಬೆಳಿಗ್ಗೆಯಿಂದ ಅಂಗಡಿ, ಮುಗ್ಗಟ್ಟುಗಳನ್ನು ಸ್ವಯಂಪ್ರೇರಿತ ಬಂದ್ ಮಾಡುವ ಮೂಲಕ ವರ್ತಕರು ಬಂದ್‌ಗೆ ಬೆಂಬಲ ಸೂಚಿಸಿದರು.
ಈಶ್ವರ ದೇವಸ್ಥಾನದಲ್ಲಿ ಸೇರಿದ ಹೋರಾಟಗಾರರು ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ರ್‍ಯಾಲಿ ಆರಂಭಿಸಿದರು. ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್, ತಾಲ್ಲೂಕಿನ ಮುಖಂಡರು, ವಿದ್ಯಾರ್ಥಿಗಳು ಸೇರಿ ಸಾವಿರಾರು ಜನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.







