ರಾಯಚೂರು: ಕಸಾಪ ಜಿಲ್ಲಾಧ್ಯಕ್ಷರ ವಿರುದ್ಧ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ

ರಾಯಚೂರು: ಕನ್ನಡ ಸಾಹಿತ್ಯ ಪರಿಷತ್ ರಾಯಚೂರು ಜಿಲ್ಲೆಯ ಅಧ್ಯಕ್ಷರಾದ ರಂಗಣ್ಣ ಪಾಟೀಲ ಅವರು ಕಳೆದ ಮೂರು ವರ್ಷಗಳಿಂದ ಯಾವುದೇ ಕನ್ನಡ ಕಾರ್ಯ ಕೈಗೊಂಡಿಲ್ಲ ಹಾಗೂ ಕಸಾಪ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಕನ್ನಡ ಭವನದ ಮುಂದೆ ರಂಗಣ್ಣ ಪಾಟೀಲ್ ವಿರುದ್ಧ ಬುದುವಾರದಂದು ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳಿಗೆ, ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಅಧಿಕಾರಿಗಳಿಗೆ ಮನವಿ ಪತ್ರ ನೀಡಿದರು.
ಪ್ರತಿಭಟನೆಯ ಸಂದರ್ಭದಲ್ಲಿ ಒಕ್ಕೂಟದ ಸಂಚಾಲಕರಾದ ಅಣ್ಣಪ್ಪ ಮೇಟಿಗೌಡ ಮಾತನಾಡಿ ಕಸಾಪ ಜಿಲ್ಲಾ ಅಧ್ಯಕ್ಷರು ಕಳೆದ ಮೂರು ವರ್ಷಗಳಿಂದ ಕಸಾಪ ಚಟುವಟಿಕೆಗಳಲ್ಲಿ ಸಂಪೂರ್ಣ ನಿಷ್ಕ್ರಿಯರಾಗಿದ್ದಾರೆ. ಒಂದು ಜಿಲ್ಲಾ ಸಮ್ಮೇಳನ ನಡೆದಿದ್ದು ಮೂರು ವರ್ಷಗಳಾದರೂ ಅದರ ಲೆಕ್ಕವನ್ನು ಇನ್ನೂ ತೋರಿಸಿಲ್ಲ. ಕನ್ನಡ ಭವನದ ಬಾಡಿಗೆ ಹಣದ ಲೆಕ್ಕವೂ ನೀಡಿಲ್ಲ. ವಾರ್ಷಿಕವಾಗಿ ಸರ್ಕಾರದಿಂದ ಬರುವ ಅನುದಾನದ ಹಣದ ಖರ್ಚು ವಿವರಗಳು ಸಾರ್ವಜನಿಕವಾಗಿ ಬಹಿರಂಗಪಡಿಸಲ್ಪಟ್ಟಿಲ್ಲ, ಜಿಲ್ಲೆಯಲ್ಲಿ ತಾಲೂಕು ಅಧ್ಯಕ್ಷರ ನೇಮಕದಲ್ಲಿ ಕಸಾಪ ಬೈಲಾ ಉಲ್ಲಂಘನೆ ಮಾಡಿ ಗೊಂದಲ ಸೃಷ್ಟಿ ಮಾಡಿದ್ದಾರೆ, ಕಸಾಪ ಹಣ ಪೋಲು ಮಾಡಿರುವ ಬಗ್ಗೆ ತನಿಖೆಯಾಗಬೇಕು ಹಾಗೂ ಕನ್ನಡ ಕಾರ್ಯಮಾಡದೇ ಇರುವುದರಿಂದ ಆಡಳಿತ ಅಧಿಕಾರಿಯನ್ನು ನೇಮಕ ಮಾಡಬೇಕು, ಜಿಲ್ಲಾಧ್ಯಕ್ಷರು ಹಾಕುವ ಯಾವುದೇ ಬೆದರಿಕೆಗೆ ಅಂಜುವವರಲ್ಲ ಕನ್ನಡದ ಅಸ್ಮಿತೆಯನ್ನು ಉಳಿಸುವ ನೆಲದಲ್ಲಿ ಹುಟ್ಟಿದವರು. ನಾವು ಕನ್ನಡ ಹೋರಾಟಕ್ಕೆ ಸದಾ ಸಿದ್ಧ ಎಂದು ಮೇಟಿಗೌಡ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮಾರುತಿ ಬಡಿಗೇರ್, ಇದುವರೆಗೂ ಜಿಲ್ಲೆಯಲ್ಲಿ ಯಾವುದೇ ಕಸಾಪ ಸರ್ವ ಸದಸ್ಯರ ಸಭೆ ನಡೆದಿಲ್ಲ. ಕಸಾಪ ಬೈಲಾ ಉಲ್ಲಂಘನೆ ಮಾಡಿ ತಾಲೂಕು ಅಧ್ಯಕ್ಷರ ನೇಮಕಾತಿಯಲ್ಲಿ ಗೊಂದಲ ಸೃಷ್ಟಿ ಮಾಡಿದ್ದಾರೆ. ದೇವದುರ್ಗ ತಾಲೂಕು ಹೊರತುಪಡಿಸಿ ಉಳಿದ ತಾಲೂಕುಗಳಲ್ಲಿ ಕಸಾಪ ಸಂಘಟನೆ ಅಸ್ತವ್ಯಸ್ತಗೊಂಡಿದ್ದು, ಕನ್ನಡ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿವೆ” ಎಂದು ಆರೋಪಿಸಿದ್ದಾರೆ.
ಒಕ್ಕೂಟದ ಸದಸ್ಯರಾದ ಎಂ.ಆರ್. ಬೇರಿ ಮಾತನಾಡಿ, "ಈ ನಮ್ಮ ಹೋರಾಟ ಕಸಾಪ ಹಾಗೂ ಕನ್ನಡದ ವಿರುದ್ದ ಅಲ್ಲ ಭ್ರಷ್ಟಾಚಾರ ಮಾಡಿದವರ ವಿರುದ್ಧ ಎಂದರು.
“ಜಿಲ್ಲಾ ಕಸಾಪ ಕಲಾವಿದರು, ಸಾಹಿತಿಗಳು, ಸಂಘಟಕರು ಹಾಗೂ ಕನ್ನಡಪರ ಹೋರಾಟಗಾರರನ್ನು ಮರೆತಿದೆ. ಹೇಳಿಕೊಳ್ಳುವಂತೆ ಒಂದು ಜಿಲ್ಲಾ ಸಮ್ಮೇಳನ ಹೊರತುಪಡಿಸಿ ಯಾವುದೇ ಚಟುವಟಿಕೆ ನಡೆದಿಲ್ಲ. ಶೀಘ್ರ ಕ್ರಮ ಕೈಗೊಂಡು ಕನ್ನಡ ಚಟುವಟಿಕೆಗಳನ್ನು ಪುನಃ ಚೇತರಿಸಬೇಕೆಂದು ನಮ್ಮ ಆಶಯವಾಗಿದೆ” ಎಂದು ಜಾನ್ ವೇಸ್ಲಿ ಹೇಳಿದರು.
ಕಾಸಪ್ಪ ಜಿಲ್ಲಾ ಘಟಕಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ ನೀಡಿಲ್ಲ ಹಾಗೂ ಮಹಿಳೆಯರಿಗೆ ಯಾವುದೇ ಗೌರವ ಸನ್ಮಾನವನ್ನು ಕೂಡ ಮಾಡದೆ ಮಹಿಳೆಯರನ್ನು ಕಡೆಗಾಣಿಸುವಂತಹ ಕೆಲಸ ಮಾಡಿದ್ದಾರೆ. ಭ್ರಷ್ಟಾಚಾರದಲ್ಲಿ ತೊಡಗಿರುವ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಕೂಡಲೇ ರಾಜೀನಾಮೆ ಕೊಡಬೇಕು, ಅವರ ವಿರುದ್ಧ ತನಿಖೆ ಆಗಲೇಬೇಕು ಎಂದು ವಿಜಯರಾಣಿ ಒತ್ತಾಯಿಸಿದರು.
ಈ ಸಂದರ್ಭ ಅಂಬಾಜಿ ರಾವು, ವಿಜಯರಾಣಿ, ಆನಂದ್ ಸ್ವಾಮಿ, ರಾಜಶೇಖರ್ ಮಾಚರ್ಲಾ, ಮಸೂದ್ ಅಲಿ, ವಂಶಿಕೃಷ್ಣ, ಮೌನೇಶ್ ವಡವಟ್ಟಿ,ಮಹೇಶ್, ಸಂಗಮೇಶ್, ಬಸವರಾಜ್, ವೆಂಕಟೇಶ್,ಕೃಷ್ಣ, ಆಂಜನೇಯ, ಕುರುಬದೊಡ್ಡಿ, ರಾಮಕೃಷ್ಣ ಪ್ರಸಾದ್, ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಒಕ್ಕೂಟದವರು ಉಪಸ್ಥಿತರಿದ್ದರು.







