ಸಿಜೆಐ ಗವಾಯಿ ಮೇಲೆ ಶೂ ಎಸೆತ ಘಟನೆ ಖಂಡಿಸಿ ಮಾನ್ವಿಯಲ್ಲಿ ಸಂವಿಧಾನ ಸಂರಕ್ಷಣಾ ವೇದಿಕೆಯಿಂದ ಪ್ರತಿಭಟನೆ

ರಾಯಚೂರು: ಸುಪ್ರೀಂಕೋರ್ಟ್ ಮುಖ್ಯನ್ಯಾಯಧೀಶರಾದ ಬಿ.ಆರ್ ಗವಾಯಿ ಅವರ ಮೇಲೆ ಶೂ ಎಸೆದ ವಕೀಲ ರಾಕೇಶ್ ಕಿಶೋರ್ ವಿರುದ್ಧ ಸಂವಿಧಾನ ಸಂರಕ್ಷಣಾ ವೇದಿಕೆ ಮಾನ್ವಿ ತಾಲೂಕು ಘಟಕದ ವತಿಯಿಂದ ಬೃಹತ್ ಪ್ರತಿಭಟನೆ ಮಾಡಲಾಯಿತು.
ಮಾನ್ವಿ ಪಟ್ಟಣದ ಬಸವ ವೃತ್ತದ ಬಳಿ ಧರಣಿ ನಡೆಸಿ ರಾಕೇಶ್ ಕಿಶೋರ್ ವಿರುದ್ಧ ಘೋಷಣೆ ಕೂಗಿ, ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಶೀಲ್ದಾರರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಹೋರಾಟಗಾರರು ಮಾತನಾಡಿ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರು ದೇಶದ ಅತ್ಯುನ್ನತ ಹುದ್ದೆಯಲ್ಲಿದ್ದು, ಅವರಿಗೇ ಶೂ ಎಸೆದ ಘಟನೆ ಅಮಾನವೀಯ. ಇದು ದೇಶವೇ ತಲೆ ತಗ್ಗಿಸುವ ಕೆಲಸ. ದೇಶದ ದಲಿತ, ಅಲ್ಪಸಂಖ್ಯಾತರು, ಹಿಂದುಳಿದ ಸಮುದಾಯದವರು ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ಬಲಪಂಥೀಯ ವಿಚಾರದವರು ಸಹಿಸಿಕೊಳ್ಳಲು ಆಗುತ್ತಿಲ್ಲ, ಸಿಜೆಐ ಮೇಲೆ ಶೂ ಎಸೆದ ನಡೆ ಉದ್ದೇಶ ಪೂರ್ವಕವಾಗಿ ನಡೆದಿದ್ದು ಬಿಜೆಪಿ ನಾಯಕರು ಇದುವರೆಗೆ ಖಂಡಿಸಿಲ್ಲ, ಬಲಪಂಥೀಯ ಸಂಘಟನೆಗಳು ಶೂಎಸೆದ ವಕೀಲ ರಾಕೇಶ ಕಿಶೋರ್ ಗೆ ಬೆಂಬಲವಾಗಿ ನಿಂತಿರುವುದು ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿಗಳು, ಸಿಜೆಐ ವಿರೋಧಿಸುವವರು ಸಂವಿಧಾನಕ್ಕೆ ಅವಮಾನ ಮಾಡಿದಂತೆ ಎಂದು ದೂರಿದರು.
ಮುಸ್ಲಿಂ ಧರ್ಮ ಗುರು ಜೀಶಾನ್ ಮುಫ್ತಿಖಾದ್ರಿ, ಬಹುಜನ ಸಂಘರ್ಷ ಸಮಿತಿಯ ಸಂಪತ್ ರಾಜ್, ಎದ್ದೇಳು ಕರ್ನಾಟಕದ ಶರಣಕುಮಾರ, ಹೋರಾಟಗಾರರಾದ ತಿಪ್ಪಣ್ಣ ಬಾಗಲವಾಡ, ಶಿವರಾಜ ಜಾನೇಕಲ್, ಪ್ರಥಮದರ್ಜೆ ಗುತ್ತೇದಾರ ಅಕ್ಬರ್ ಪಾಶ, ಫರೀದ್ ಉಮ್ರಿ, ಯಲ್ಲಪ್ಪ ಹಿರೇಬಾದರದಿನ್ನಿ ವಕೀಲ, ರವಿಕುಮಾರ ಕೋನಾಪುರಪೆಟೆ, ಹುಸೇನಪ್ಪ ಜಗ್ಲಿ, ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿವಿಯ ಸಿಂಡಿಕೇಟ್ ಜೀಶಾನ್ ಆಖಿಲ್ ಸಿದ್ದೀಖಿ, ಸುಬಾನ್ ಬೇಗ್, ಮುಹಮ್ಮದ್ ಬೇಗ್, ಶರಣಬಸವ ಜಾನೇಕಲ್ ಉಪಸ್ಥಿತರಿದ್ದರು.







