ನಕಲಿ ಜಾತಿ ಪ್ರಮಾಣ ಪತ್ರ ನೀಡುವುದನ್ನು ಖಂಡಿಸಿ ಆ. 13 ರಂದು ವಾಲ್ಮೀಕಿ ಸಮುದಾಯದಿಂದ ಬೃಹತ್ ಪ್ರತಿಭಟನೆ: ರಘೂವೀರ್ ನಾಯಕ

ರಾಯಚೂರು: ತಳವಾರ ಹಾಗೂ ಪರಿವಾರ ಹೆಸರಿನಲ್ಲಿ ನಕಲಿ ಎಸ್.ಟಿ. ಪ್ರಮಾಣಪತ್ರಗಳ ವಿತರಣೆಯನ್ನು ತಡೆಗಟ್ಟುವಂತೆ ಹಾಗೂ ಎನ್ ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿರುವುದನ್ನು ಖಂಡಿಸಿ ಯಾದಗಿರಿಯಲ್ಲಿ ಆಗಸ್ಟ್ 13ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೈದರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕರ ಸಂಘದ ವಿಭಾಗಿಯ ಕಾರ್ಯದರ್ಶಿ ಎನ್ ರಘವೀರ ನಾಯಕ ತಿಳಿಸಿದರು.
ಅವರಿಂದು ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 257 ದಿನಗಳ ನಿರಂತರ ಹೋರಾಟದ ಫಲವಾಗಿ ಹಿಂದಿನ ಸರಕಾರದಲ್ಲಿ ಪರಿಶಿಷ್ಟ ಪಂಗಡ ಮೀಸಲಾತಿ 3%ರಿಂದ 7%ಕ್ಕೆ ಹಾಗೂ ಪರಿಶಿಷ್ಟ ಜಾತಿ ಮೀಸಲಾತಿ 15%ರಿಂದ 17%ಕ್ಕೆ ಹೆಚ್ಚಳ ಮಾಡಲಾಗಿತ್ತು. ಆದರೆ, ಹಿಂದಿನ ಸರಕಾರದ ಮುಖ್ಯಮಂತ್ರಿಗಳ ತಪ್ಪು ಹೇಳಿಕೆ ಕಾರಣದಿಂದ ಆ ಸರ್ಕಾರಕ್ಕೆ ಚುನಾವಣೆಯಲ್ಲಿ ಸೋಲನುಭವಿಸಿತು ಎಂದು ಆಪಾದಿಸಿದರು.
ನಾಯಕ ಸಮುದಾಯದ ಪರ್ಯಾಯ ಪದಗಳಾದ "ನಾಯಕ ತಳವಾರ" ಮತ್ತು "ನಾಯಕ ಪರಿವಾರ" ಹೆಸರಿನಲ್ಲಿ, ಹಿಂದುಳಿದ ವರ್ಗಕ್ಕೆ ಸೇರಿದವರಿಗೂ ನಕಲಿ ಎಸ್.ಟಿ. ಪ್ರಮಾಣಪತ್ರಗಳನ್ನು ನೀಡಲಾಗುತ್ತಿದೆ. ಕೇಂದ್ರ ಸರಕಾರದ ಸ್ಪಷ್ಟ ಆದೇಶವಿದ್ದರೂ ಈ ಅಕ್ರಮ ನಿಂತಿಲ್ಲ. ಹೀಗಾಗಿ ಜಗದ್ಗುರು ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮಿಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ನೇರವಾಗಿ ಹಾಗೂ ಸತ್ಯವನ್ನು ಮಾತನಾಡುವ ಕೆ.ಎನ್. ರಾಜಣ್ಣ ಅವರನ್ನು ಸಂಪುಟದಿಂದ ಕೈಬಿಟ್ಟಿರುವುದನ್ನು ಖಂಡನೀಯ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದು ಹಕ್ಕಿದೆ. ಆದರೆ ಈ ಸರಕಾರ ವಾಲ್ಮೀಕಿ ಸಮುದಾಯದ ಸಚಿವರನ್ನು ಹಂತ ಹಂತವಾಗಿ ದೂರ ಮಾಡುತ್ತಿದೆ ಎಂಬ ಭಾವನೆ ಜನರಲ್ಲಿ ಮೂಡಿದೆ. ತಕ್ಷಣವೇ ಕೆ.ಎನ್. ರಾಜಣ್ಣ ಅವರಿಗೆ ಹಿಂದಿನ ಖಾತೆಯನ್ನು ನೀಡಬೇಕು, ಇಲ್ಲದಿದ್ದರೆ ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರಾಚಣ್ಣ ನಾಯಕ, ರಾಮು ನಾಯಕ ಹಾಗೂ ರಾಮಕೃಷ್ಣ ನಾಯಕ ಉಪಸ್ಥಿತರಿದ್ದರು.







