ಕಾಂಗ್ರೆಸ್ ಸರಕಾರದಿಂದ ಒಳ ಮೀಸಲಾತಿ ಜಾರಿಯ ವಿಳಂಬ ಖಂಡಿಸಿ ಆ.10ರಿಂದ ಹೋರಾಟಕ್ಕೆ ತೀರ್ಮಾನ: ಮಾಜಿ ಸಚಿವ ನಾರಾಯಣಸ್ವಾಮಿ

ರಾಯಚೂರು : ಸುಪ್ರೀಂಕೋರ್ಟ್ ತೀರ್ಪಿನ ನಂತರವೂ ರಾಜ್ಯದ ಕಾಂಗ್ರೆಸ್ ಸರ್ಕಾರ ಒಳಮೀಸಲಾತಿ ಜಾರಿ ಮಾಡಲು ವಿಳಂಬ ಧೋರಣೆ ಅನುಸರಿಸುತ್ತಿದ್ದು, ಆಗಸ್ಟ್ ನಲ್ಲಿ ನಡೆಯುವ ಮುಂಬರುವ ಅಧಿವೇಶನದಲ್ಲಿ ಜಾರಿ ಮಾಡದಿದ್ದರೆ ಸರ್ಕಾರದ ವಿರುದ್ಧ ಐಕ್ಯ ಹೋರಾಟ ಮಾಡಲಾಗುವುದು ಎಂದು ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ ತಿಳಿಸಿದರು.
ಅವರಿಂದು ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕೆ ಬರುವ ಮುನ್ನ ಎಐಸಿಸಿ ಅಧ್ಯಕ್ಷರ ಸಮ್ಮುಖದಲ್ಲೇ ಒಳಮೀಸಲಾತಿ ನೀಡುವ ಭರವಸೆ ನೀಡಿದ್ದರು. ಆದರೆ ಕಾಲಹರಣ ಮಾಡಿ, ಮೋಸ ಮಾಡುತ್ತಿದ್ದಾರೆ ಎಂದು ದೂರಿದರು.
ಒಳ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಆರಂಭದಿಂದಲೂ ಗೊಂದಲ ಸೃಷ್ಠಿಸಿ, ದಲಿತ ಸಮುದಾಯಗಳನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ, ಸಚಿವರಾದ ಪರಮೇಶ್ವರ್, ಎಚ್.ಸಿ.ಮಹಾದೇವಪ್ಪ, ಕೆ.ಎಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪುರ ಸೇರಿ ಅನೇಕರು ದಲಿತ ನಾಯಕರು ಒಳ ಮೀಸಲಾತಿ ಜಾರಿ ವಿಚಾರದಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಒಳ ಮೀಸಲು ಆಯಾ ರಾಜ್ಯಗಳಿಗೆ ಬಿಟ್ಟ ಸಂಗತಿಯಾಗಿದೆ ಎಂದು ಸುಪ್ರೀಂ ಸ್ಪಷ್ಟವಾಗಿ ಸೂಚಿಸಿದ್ದರು ಸಹ, ಆಯೋಗ ರಚನೆ, ಜಾತಿ ಸರ್ವೆ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ಕಾಲಹರಣ ಮಾಡುತ್ತಿದೆ. ನ್ಯಾ.ನಾಗಮೋಹನ ದಾಸ್ ಆಯೋಗಕ್ಕೆ ಅಗತ್ಯವಾದ ಸಹಕಾರವನ್ನು ನೀಡುವಲ್ಲಿ ಸರ್ಕಾರ ಹಾಗೂ ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದು, ಸರ್ಕಾರದ ಬೇಜವಾಬ್ದಾರಿ ತನದಿಂದ ಶೋಷಿತ ಸಮುದಾಯಗಳಿಗೆ ನ್ಯಾಯ ಸಿಗುವುದೇ ಅನುಮಾನ ಎನ್ನುವ ಪರಿಸ್ಥಿತಿಯನ್ನು ನಿರ್ಮಿಸಿದ್ದಾರೆ. ಆ.10 ರಿಂದ 18 ನಡೆಯಲಿರುವ ಅಧಿವೇಶನದಲ್ಲಿ ಒಳ ಮೀಸಲಾತಿ ಜಾರಿಗೆ ಮುಂದಾಗಬೇಕು. ಇಲ್ಲವಾದಲ್ಲಿ ಒಗ್ಗಟ್ಟಿನ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ಇ ವೇಳೆ ಮುಖಂಡರಾದ ಎಸ್.ಮಾರೆಪ್ಪ, ಮಂಜುನಾಥ, ರವೀಂದ್ರ ಜಲ್ದಾರ್, ತಿಮ್ಮಪ್ಪ ಫಿರಂಗಿ, ಎಂ.ವಿರೂಪಾಕ್ಷಿ,ಪಿ.ಯಲ್ಲಪ್ಪ, ನರಸಪ್ಪ ದಂಡೋರಾ ಇದ್ದರು.







