ತುಂಗಭದ್ರ ಜಲಾಶಯದ ಕ್ರಸ್ಟ್ ಗೇಟ್ ಆ.31ರೊಳಗೆ ಅಳವಡಿಸದಿದ್ದಲ್ಲಿ ಪ್ರತಿಭಟನೆ : ರೈತ ಸಂಘದಿಂದ ಎಚ್ಚರಿಕೆ

ರಾಯಚೂರು: ತುಂಗಭದ್ರ ಜಲಾಶಯದ 19ನೇ ಕ್ರಸ್ಟ್ ಗೇಟ್ ಕಳಚಿ ಒಂದು ವರ್ಷ ಕಳೆದರೂ ಬದಲಿಸಿಲ್ಲ. ರೈತರು ಸಂಕಷ್ಟಕ್ಕೆ ಈಡಾಗಿದ್ದು, ಆ.31ರೊಳಗೆ ಅಳವಡಿಸದಿದ್ದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ್ ಹೇಳಿದರು.
ಅವರಿಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ, ಹಿಂದೆಯೇ ಗೇಟ್ ಕೊಚ್ಚಿಕೊಂಡು ಹೋದಾಗ ಜಲಾಶಯದ ಎಲ್ಲಾ ಗೇಟ್‌ಗಳನ್ನು ಬದಲಿಸಲು ಜಲಾಶಯದ ಸುರಕ್ಷತಾ ತಜ್ಞರು ವರದಿ ನೀಡಿದ್ದರು. ಕಳೆದ ವರ್ಷ್ ಆಗಸ್ಟ್ ನಲ್ಲಿ ಜಲಾಶಯದ 19ನೇ ಕ್ರಸ್ಟ್ ಗೇಟ್ ಮುರಿದುಬಿದ್ದಿತ್ತು. ಹೀಗಾಗಿ ಸಾವಿರಾರು ಕ್ಯುಸೆಕ್ ನೀರು ಹರಿದು ವ್ಯರ್ಥವಾಗಿದೆ. ಅದಕ್ಕೆ ಶಾಶ್ವತ ಪರಿಹಾರ ನೀಡದೆ ವಿಳಂಬ ಮಾಡಿದ್ದರಿಂದ ನೀರಿನ ಒತ್ತಡ ಇತರ ಗೇಟ್‌ಗಳ ಮೇಲೆ ಬಿದ್ದಿದೆ. ಇದರ ಪರಿಣಾಮವಾಗಿ ಎಲ್ಲಾ 33 ಕ್ರಸ್ಟ್ ಗೇಟನ್ನೂ ತಕ್ಷಣ ಬದಲಿಸಬೇಕಾದ ಪರಿಸ್ಥಿತಿ ಒದಗಿಬಂದಿದೆ ಎಂದರು.
ಕೊಪ್ಪಳ, ರಾಯಚೂರು, ಬಳ್ಳಾರಿ ಮೊದಲಾದ ಜಿಲ್ಲೆಗಳ ರೈತರು ಪ್ರತಿವರ್ಷ 2 ಬೆಳೆ ಬೆಳೆಯುತ್ತಿದ್ದರು. ಆದರೆ, ರಾಜ್ಯ ಸರ್ಕಾರ ಅಥವಾ ಸಂಬಂಧಿತ ಸಚಿವರು, ತುಂಗಭದ್ರಾ ಜಲಾಶಯ ನೀರಾವರಿ ಮಂಡಳಿಯಲ್ಲಿ ಚರ್ಚೆ ಮಾಡಿ, ಒತ್ತಡ ಹಾಕದ ಪರಿಣಾಮವಾಗಿ ಈ ಬಾರಿ ರೈತರು ಒಂದೇ ಬೆಳೆಗೆ ತೃಪ್ತಿ ಪಡುವ ಸಂದರ್ಭ ಬಂದಿದೆ ಎಂದರು.
ಕೊಪ್ಪಳ, ರಾಯಚೂರು, ವಿಜಯನಗರ, ಬಳ್ಳಾರಿ ಜಿಲ್ಲೆಗಳ ರೈತರು ಇದೇ ನೀರನ್ನು ಕುಡಿಯಲು ಮತ್ತು ಕೃಷಿ ಚಟುವಟಿಕೆಗೆ ಬಳಸಿಕೊಳ್ಳುತ್ತಾರೆ. ಪ್ರತಿ ವರ್ಷ ಎರಡು ಭತ್ತದ ಬೆಳೆಗಳನ್ನು ಬೆಳೆಯಲು ಈ ನೀರು ಆಸರೆಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಭಾಕರ್ ಪಾಟೀಲ್, ಬೂದಯ್ಯ ಸ್ವಾಮಿ, ದೇವರಾಜ್, ಸೇರಿದಂತೆ ಇತರರು ಉಪಸ್ಥಿತರಿದ್ದರು.







