ದಲಿತರ ಮೇಲಿನ ಸರಣಿ ದೌರ್ಜನ್ಯ ಖಂಡಿಸಿ ಮಸ್ಕಿಯಲ್ಲಿ ಪ್ರತಿಭಟನೆ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಮಸ್ಕಿ: ರಾಯಚೂರು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಇತ್ತೀಚೆಗೆ ನಡೆದಿರುವ ದಲಿತರ ಮೇಲಿನ ದೌರ್ಜನ್ಯ, ಅತ್ಯಾಚಾರ, ಕೊಲೆ, ಅವಮಾನ ಹಾಗೂ ಹಲ್ಲೆ ಪ್ರಕರಣಗಳನ್ನು ಖಂಡಿಸಿ ದಲಿತ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಮಸ್ಕಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ ಸಂಘಟನೆಗಳ ಮುಖಂಡರು, ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದ ಅಶ್ವಿನಿ, ಲಿಂಗಸುಗೂರು ತಾಲೂಕಿನ ಕರಡಕಲ್ ಗ್ರಾಮದ ರಾಣೆಮ್ಮ ಹಾಗೂ ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ಭೂಮಾನಂದ ಅವರ ಪ್ರಕರಣಗಳನ್ನು ಉಲ್ಲೇಖಿಸಿ, ಆರೋಪಿಗಳನ್ನು ಕೂಡಲೇ ಬಂಧಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ದಲಿತರು ಹಾಗೂ ದುರ್ಬಲ ವರ್ಗದವರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮತ್ತು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಕಾನೂನು ಕ್ರಮ ಜರುಗಿಸಬೇಕು ಎಂದು ಮುಖಂಡರು ಒತ್ತಾಯಿಸಿದರು.
ಮಸ್ಕಿ ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಮೌನೇಶ ಮುರಾರಿ ಮಾತನಾಡಿ, ರಾಜಕೀಯ ಪಕ್ಷಗಳ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ದಲಿತರ ಹಕ್ಕು, ನ್ಯಾಯ ಹಾಗೂ ಸ್ವಾಭಿಮಾನಕ್ಕಾಗಿ ಒಗ್ಗಟ್ಟಿನಿಂದ ಹೋರಾಡಬೇಕಿದೆ. ದೌರ್ಜನ್ಯಕ್ಕೊಳಗಾದವರ ಪರವಾಗಿ ಸಂಘಟಿತವಾಗಿ ಧ್ವನಿ ಎತ್ತಬೇಕು ಎಂದು ಹೇಳಿದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ದೊಡ್ಡಪ್ಪ ಮುರಾರಿ ಮಾತನಾಡಿ, ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು. ಸಂತ್ರಸ್ತರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
ಹಿರಿಯ ಸಾಹಿತಿ ದಾನಪ್ಪ ಸಿ. ನೀಲೋಗಲ್ ಮಾತನಾಡಿ, ಸಂವಿಧಾನ ವಿರೋಧಿ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಕಾನೂನಿನ ಆಳ್ವಿಕೆ ಹಾಗೂ ಮಾನವ ಹಕ್ಕುಗಳನ್ನು ಗೌರವಿಸುವ ವಾತಾವರಣ ನಿರ್ಮಾಣವಾಗಬೇಕು ಎಂದು ಒತ್ತಾಯಿಸಿದರು.
ಬಿ. ತಿಕ್ಕಯ್ಯ ಬಳಗಾನೂರು ಮಾತನಾಡಿ, ಜಿಲ್ಲೆಯ ವಿವಿಧ ಮೀಸಲು ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗಗಳ ಜನರ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಹೆಚ್ಚಿನ ಗಮನ ಹರಿಸಬೇಕು. ದಲಿತರು ಮತ್ತು ಹಿಂದುಳಿದ ವರ್ಗಗಳ ರಕ್ಷಣೆಗೆ ಸರ್ಕಾರ ಆದ್ಯತೆ ನೀಡಬೇಕು ಎಂದು ಹೇಳಿದರು.
ಡಿಎಸ್‌ಎಸ್ ಮುಖಂಡ ಮೌನೇಶ ದೊಡ್ಡಮನಿ ಮಾತನಾಡಿ, ದಲಿತರು ಹಾಗೂ ಮಹಿಳೆಯರು ಭಯವಿಲ್ಲದೆ ಬದುಕುವಂತಹ ವಾತಾವರಣ ನಿರ್ಮಾಣವಾಗಬೇಕು. ಅವರ ಹಕ್ಕು, ಸ್ವಾಭಿಮಾನ ಹಾಗೂ ಸುರಕ್ಷತೆಗೆ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ದಲಿತ ಹಿರಿಯ ಮುಖಂಡ ಹನುಮಂತಪ್ಪ ವೆಂಕಟಾಪೂರು ಮಾತನಾಡಿ, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ ಇನ್ನಷ್ಟು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ದಲಿತರ ಜೀವ ಮತ್ತು ಹಕ್ಕುಗಳ ರಕ್ಷಣೆಗೆ ಸರ್ಕಾರ ವಿಶೇಷ ಗಮನ ನೀಡಬೇಕು ಎಂದು ಒತ್ತಾಯಿಸಿದರು.
ಡಿಎಸ್‌ಎಸ್ ಜಿಲ್ಲಾ ಸಂಯೋಜಕ ಬಣದ ಅಧ್ಯಕ್ಷ ಮಲ್ಲಪ್ಪ ಎಸ್. ಗೋನಾಳ ಮಾತನಾಡಿ, ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಕುರಿತು ಗೃಹ ಸಚಿವರು ಜಿಲ್ಲೆಗೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸಬೇಕು. ಪ್ರಕರಣಗಳಲ್ಲಿ ಭಾಗಿಯಾದವರ ವಿರುದ್ಧ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಂತರ ಪ್ರತಿಭಟನಾಕಾರರು ಮಸ್ಕಿ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಮನವಿ ಸಲ್ಲಿಸಿ, ಆರೋಪಿಗಳ ಬಂಧನ, ನಿಷ್ಪಕ್ಷಪಾತ ತನಿಖೆ, ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಮತ್ತು ರಕ್ಷಣೆ ಹಾಗೂ ದಲಿತರು ಮತ್ತು ಮಹಿಳೆಯರ ಸುರಕ್ಷತೆಗೆ ವಿಶೇಷ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಸ್ಕಿ ಪುರಸಭೆ ವಿರೋಧ ಪಕ್ಷದ ನಾಯಕ ದೊಡ್ಡ ಕರಿಯಪ್ಪ ಮುರಾರಿ, ದುರ್ಗಾಪ್ರಸಾದ್ ತೋರಣದಿನ್ನಿ, ಮೌನೇಶ ಬಳಗಾನೂರು, ಅಮರೇಶ ಪಾಮನಕಲ್ಲೂರು, ಯಮುನೂರಪ್ಪ ಭೇರ್ಗಿ, ಬಸವರಾಜ ಆರ್.ಡಿ. ಉದ್ಬಾಳ, ಕಿರಣ್ ವಿ. ಮುರಾರಿ, ಪ್ರಶಾಂತ ಕೊಠಾರಿ, ರಂಜಿತ್ ಮುರಾರಿ, ಹನುಮಂತಪ್ಪ ಮೆದಿಕಿನಾಳ, ರವಿ ಬೆಳಗಿನೂರು, ರವಿ ಮೆದಿಕಿನಾಳ, ಬಸವರಾಜ ಇರಕಲ್, ಹುಚ್ಚರಡ್ಡಿ ಮೆದಿಕಿನಾಳ ಸೇರಿದಂತೆ ದಲಿತ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.






