ವೆನೆಝುವೆಲಾ ಆಕ್ರಮಣ ಖಂಡಿಸಿ ರಾಯಚೂರಿನಲ್ಲಿ ಪ್ರತಿಭಟನೆ; ಟ್ರಂಪ್ ಪ್ರತಿಕೃತಿ ದಹನ

ರಾಯಚೂರು: ವೆನೆಜುವೆಲಾದ ಮೇಲೆ ಅಮೆರಿಕ ನಡೆಸಿದ ಆಕ್ರಮಣವನ್ನು ಹಾಗೂ ಈ ಕುರಿತು ಭಾರತ ಸರ್ಕಾರ ಸ್ಪಷ್ಟ ನಿಲುವು ತಾಳದಿರುವುದನ್ನು ಖಂಡಿಸಿ ಸಿಪಿಐ(ಎಂ) ಹಾಗೂ ಸಿಪಿಐ(ಎಂಎಲ್) ಲಿಬರೇಶನ್ ಪಕ್ಷಗಳ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ವೆನೆಜುವೆಲಾದ ಅಧ್ಯಕ್ಷ ಮತ್ತು ಅವರ ಪತ್ನಿಯನ್ನು ಅಮೆರಿಕದ ಸಶಸ್ತ್ರ ಪಡೆಗಳು ಅಪಹರಿಸಿರುವುದು ಅಂತರರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ಚಾರ್ಟರ್‌ಗೆ ವಿರುದ್ಧವಾಗಿದೆ. ಆದರೆ ಈ ಕುರಿತು ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಂಜುಬುರುಕ ಹಾಗೂ ಅಪಮಾನಕರ ನಿಲುವು ತಾಳಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ವಿದೇಶಾಂಗ ಸಚಿವಾಲಯದ ಹೇಳಿಕೆಯಲ್ಲಿ ಕೇವಲ ‘ಆಳವಾದ ಕಳವಳ’ ವ್ಯಕ್ತಪಡಿಸಿ ಸಂವಾದಕ್ಕೆ ಕರೆ ನೀಡಿರುವುದನ್ನು ಖಂಡಿಸಿದ ಅವರು, ಅಮೆರಿಕದ ಆಕ್ರಮಣವನ್ನು ಸ್ಪಷ್ಟವಾಗಿ ಖಂಡಿಸದಿರುವುದು ಭಾರತದ ಪರಂಪರাগত ವಿದೇಶಾಂಗ ನೀತಿಗೆ ವಿರುದ್ಧವಾಗಿದೆ ಎಂದರು. ಬ್ರೆಜಿಲ್ ಹಾಗೂ ದಕ್ಷಿಣ ಆಫ್ರಿಕಾದಂತಹ ಬ್ರಿಕ್ಸ್ ರಾಷ್ಟ್ರಗಳು ಅಮೆರಿಕದ ಕ್ರಮವನ್ನು ಬಲವಾಗಿ ಖಂಡಿಸಿರುವುದನ್ನು ಉಲ್ಲೇಖಿಸಿದರು.
ಮೋದಿ ಸರ್ಕಾರ ಅಮೆರಿಕಾ ಪರ ನಿಲುವನ್ನು ಕೈಬಿಟ್ಟು, ವೆನೆಜುವೆಲಾದ ಮೇಲಿನ ಆಕ್ರಮಣ ಹಾಗೂ ಕಾನೂನುಬಾಹಿರ ಕೃತ್ಯಗಳನ್ನು ಸ್ಪಷ್ಟವಾಗಿ ಖಂಡಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಕೆ.ಜಿ. ವಿರೇಶ, ಸಿಪಿಐ(ಎಂಎಲ್) ಲಿಬರೇಶನ್ ಜಿಲ್ಲಾ ಮುಖಂಡ ಅಜೀಜ್ ಜಾಗೀರದಾರ್ ಸೇರಿದಂತೆ ಎರಡು ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.







