ಮಳೆಯಿಂದ ಹಾನಿ: ಬೆಳೆ ನಷ್ಟ ಪರಿಹಾರಕ್ಕಾಗಿ ಅ.13 ರಂದು ಪ್ರತಿಭಟನೆ

ರಾಯಚೂರು: ಸತತ ಮಳೆಯಿಂದ ಬೆಳೆಹಾನಿಯಾದ ಬಗ್ಗೆ ಸಮರ್ಪಕವಾಗಿ ಸಮೀಕ್ಷೆ ಹಾನಿಗೆ ಪೂರ್ಣ ಪ್ರಮಾಣದ ನಷ್ಟ ಪರಿಹಾರ ಸರ್ಕಾರ ನೀಡಬೇಕೆಂದು ಆಗ್ರಹಿಸಿ ಅ.13 ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಅಖಿಲ ಭಾರತ ಕಿಸಾನ್ ಸಂಘಟನೆ ರಾಜ್ಯ ಸಂಚಾಲಕ ಬಸವಲಿಂಗಪ್ಪ ಹೇಳಿದರು.
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ಜಿಲ್ಲೆಯಲ್ಲಿ ಹತ್ತಿ, ತೊಗರಿ, ಸಜ್ಜೆ, ಸೂರ್ಯಕಾಂತಿ ಸೇರಿದಂತೆ ಅನೇಕ ಬೆಳೆಗಳು ಮಳೆಯಿಂದ ಹಾನಿಯಾಗಿವೆ.
ಆದರೆ ರಾಜ್ಯ ಸರ್ಕಾರ ಬೆಳೆ ಸಮೀಕ್ಷೆ ನಡೆಸುವದಾಗಿ, ಡ್ರೋನ್ ಮೂಲಕ ಸರ್ವೆ ಮಾಡುವದಾಗಿ ಹೇಳುತ್ತಿದೆ. ರೈತರು ಪ್ರತಿ ಎಕರೆ ಮಾಡುವ ವೆಚ್ಚಕ್ಕೂ ಸರ್ಕಾರ ನೀಡುವ ಪರಿಹಾರಕ್ಕೂ ಹೋಲಿಕೆಯೇ ಇಲ್ಲದಂತಾಗಿದೆ. ದುಬಾರಿ ದರದಲ್ಲಿ ಬೀಜ, ಗೊಬ್ಬರ, ಕ್ರಿಮಿನಾಶಕ್ಕೆ ವೆಚ್ಚ ಮಾಡಿರುವ ರೈತರಿಗೆ ಸರ್ಕಾರದ ಮೇಲೆ ಭರವಸೆಯೇ ಕಳೆದುಕೊಳ್ಳುವಂತಾಗಿದೆ. ಪ್ರತಿಬಾರಿ ನಷ್ಟವಾದಾಗಲೂ ಸರ್ಕಾರ ನೀಡುವ ಪರಿಹಾರ ಬೀಜಕ್ಕೂ ಸಾಕಾಗುತ್ತಿಲ್ಲ. ಕೃಷಿ ನಷ್ಟದಿಂದ ಹೊರಬರದಂತಾಗಿದೆ. ಈ ಮಧ್ಯೆ ಹತ್ತಿ ಆಮುದು ನೀತಿಯನ್ನು ಕೇಂದ್ರದ ನರೇಂದ್ರ ಮೋದಿ ಸರ್ಕಾರ ಅನುಸುತ್ತಿರುವ ಪರಿಣಾಮ ಹತ್ತಿಬೆಳೆಗಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ವಿದೇಶಿ ಹತ್ತಿ ಬರುತ್ತಿರುವ ಪರಿಣಾಮ ಹತ್ತಿ ಬೆಲೆ ಕುಸಿತವಾಗಲುಕಾರಣವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಸಂಕಷ್ಟ ಅರ್ಥ ಮಾಡಿಕೊಳ್ಳುತ್ತಿಲ್ಲ. ಕಾರ್ಪೋರೇಟ್ ಪರವಾದ ನೀತಿಗಳನ್ನೇ ಅನುಸರಿಸುತ್ತಲೇ ಇವೆ. ಸರ್ಕಾರದ ನೀತಿ ವಿರುದ್ದ ಸಂಘಟನೆಯಿಂದ ಜಿಲ್ಲಾಧ್ಯಕ್ಷ ಮುದಕಪ್ಪ ನಾಯಕ ನೇತೃತ್ವದಲ್ಲಿ ಜಿಲ್ಲೆಯಾಧ್ಯಂತ ಸಂಚರಿಸಿ ರೈತರನ್ನು ಸಂಘಟಿಸಲಾಗುತ್ತದೆ. ಬೆಳೆನಷ್ಟಕ್ಕೆ ಕೂಡಲೇ ಪರಿಹಾರ ನೀಡಲು ಹೋರಾಟ ನಡೆಸುವುದಾಗಿ ಹೇಳಿದರು.
ಈ ಸಂದರ್ಬಧಲ್ಲಿ ಮದುಕಪ್ಪ ನಾಯಕ, ಈರಪ್ಪ ಕುರ್ಡಿ, ಯಲ್ಲಪ್ಪ ನಾಯಕ, ಆನಂದ ಭೋವಿ, ಪ್ರಸಾದ, ಯಲ್ಲಪ್ಪ ಮಲ್ಲಾಪುರು ಸೇರಿ ಅನೇಕರಿದ್ದರು.





