ಭೂಮಾನಂದ ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸಿ: ಡಾ. ಮೂರ್ತಿ ಎಲ್
ಹದ್ದಿನಾಳ ಗ್ರಾಮಕ್ಕೆ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ತಂಡ ಭೇಟಿ

ರಾಯಚೂರು: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ಭೂಮಾನಂದ ಹದ್ದಿನಾಳ ಅವರನ್ನು ಇತ್ತೀಚೆಗೆ ಸುಂಕೇಶ್ವರಹಾಳ ಗ್ರಾಮದ ಬಳಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿದ ಹಿನ್ನೆಲೆಯಲ್ಲಿ ಆಗಸ್ಟ್ 30ರ ಸಂಜೆ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರಾದ ಡಾ.ಮೂರ್ತಿ ಎಲ್. ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿ.ನರೇಂದ್ರ ಅವರು ಭೇಟಿ ನೀಡಿ ಕುಟುಂಬದ ಸದಸ್ಯರಿಂದ ಮಾಹಿತಿ ಪಡೆದರು.
ಕೊಲೆಯಾದ ವ್ಯಕ್ತಿಗೆ ಸಣ್ಣಸಣ್ಣ ಮಕ್ಕಳಲ್ಲಿದ್ದು, ಕುಟುಂಬದ ನಿರ್ವಹಣೆಗೆ ತುಂಬಾ ಕಷ್ಟವಾಗಿದೆ. ಕೊಲೆ ಪ್ರಕರಣದಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು. ನಮ್ಮ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ನಮ್ಮ ಕುಟುಂಬವು ಭಯದ ವಾತಾವರಣದಲ್ಲಿ ನಿತ್ಯ ಜೀವನ ನಡೆಸಲಾಗುತ್ತದೆ. ಆರೋಪಿಗಳಿಂದ ಸಾಕ್ಷಿ ನಾಶಕ್ಕೆ ಪ್ರಯತ್ನ ನಡೆಸಲಾಗುತ್ತಿದೆ ಎಂದು ಕುಟುಂಬದ ಸದಸ್ಯರು ಹೇಳಿದರು.
ಈ ವೇಳೆ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರಾದ ಡಾ.ಮೂರ್ತಿ ಎಲ್. ಅವರು ಮಾತನಾಡಿ, ಕುಟುಂಬಕ್ಕೆ ಯಾವುದಾದರೂ ಭಯದ ವಾತಾವರಣ ಇದ್ದಲ್ಲಿ ಕೂಡಲೇ ಪೊಲೀಸರಿಗೆ ಬರವಣಿಗೆ ರೂಪದಲ್ಲಿ ದೂರು ನೀಡಬೇಕು. ಅಲ್ಲದೆ ಪೊಲೀಸ್ ಇಲಾಖೆಯಿಂದ ಕುಟುಂಬಕ್ಕೆ ಸೂಕ್ತ ಭದ್ರತೆಯನ್ನು ಒದಗಿಸಬೇಕು. ಕೊಲೆಯಾಗಿ ನಾಲ್ಕು ವಾರಗಳು ಕಳೆದಿವೆ. ಕೂಡಲೇ ಆರೋಪಗಳನ್ನು ಬಂಧಿಸಬೇಕು. ಕುಟುಂಬಕ್ಕೆ ಅನ್ಯಾಯವಾಗಬಾರದು. ಆ ನಿಟ್ಟಿನಲ್ಲಿ ಪೊಲೀಸರು ಕ್ರಮ ವಹಿಸಬೇಕು. ಕುಟುಂಬವು ಯಾವುದೇ ಸಮಯದಲ್ಲಿಯೂ ಎದೆಗುಂದಬಾರದು ಎಂದರು.
ಭೂಮಾನಂದ ಅವರ ಮಕ್ಕಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಅಗತ್ಯ ನೆರವು ನೀಡಲಾಗುವುದು. ಅಲ್ಲದೆ ಭೂಮಾನಂದ ಹೆಂಡತಿಗೆ ಸರ್ಕಾರಿ ನೌಕರಿ ನೀಡುವ ಸಂಬಂಧ ಸೂಕ್ತ ಕ್ರಮ ವಹಿಸಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಸದಸ್ಯರಾದ ಸುನೀಲ್ ಎಂ.ಉಕ್ಕಲಿ, ಎನ್.ದಿವಾಕರ್, ಗೀತಾ ಥಾಂವಶಿ ಹಾಗೂ ಕಾರ್ಯದರ್ಶಿ ಡಾ.ಹೆಚ್.ಎಸ್.ಶಿವರಾಮು, ರಾಯಚೂರು ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಹಾಲ ಸಿದ್ದಪ್ಪ ಪೂಜಾರಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕೃಷ್ಣ ಶಾವಂತಗೇರ, ಲಿಂಗಸುಗೂರು ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ್, ದೇವದುರ್ಗ ತಹಶಿಲ್ದಾರ್ ನಾಗಮ್ಮ ಕಟ್ಟಿಮನಿ, ದೇವದುರ್ಗ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಜಕುಮಾರ ಸೇರಿದಂತೆ ಭೂಮಾನಂದ ಕುಟುಂಬಸ್ಥರು, ಊರಿನ ನಾಗರಿಕರು ಇದ್ದರು.






