ರಾಯಚೂರಿನ ಸ್ವಚ್ಛತೆಗೆ ಸಾರ್ವಜನಿಕರ ಸಹಕಾರ ಅಗತ್ಯ: ಆಯುಕ್ತ ಜುಬಿನ್ ಮೊಹಪಾತ್ರ

ರಾಯಚೂರು : ರಾಯಚೂರು ನಗರದ ಸ್ವಚ್ಛತೆಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶ್ರಮಿಸುವುದಷ್ಟೇ ಸಾಲದು, ಸಾರ್ವಜನಿಕರ ಸಹಕಾರವೂ ಅತ್ಯಗತ್ಯ ಎಂದು ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಪಾತ್ರ ಹೇಳಿದರು.
ನಗರದ ಲಿಂಗಸುಗೂರು ರಸ್ತೆಯಲ್ಲಿ ಮಂಗಳವಾರ ರಸ್ತೆ ಸ್ವಚ್ಛಗೊಳಿಸುವ ಎರಡು ಮೆಕ್ಯಾನಿಕಲ್ ಸ್ವೀಪರ್ ವಾಹನಗಳ ಪ್ರಾತ್ಯಕ್ಷಿಕೆ ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎರಡು ಮೆಕ್ಯಾನಿಕಲ್ ಸ್ವೀಪರ್ ವಾಹನಗಳನ್ನು ಪ್ರಾಯೋಗಿಕವಾಗಿ ತರಿಸಲಾಗಿದ್ದು, ಮಳೆಗಾಲದಲ್ಲಿ ರಸ್ತೆ ಸ್ವಚ್ಛತೆ ಮತ್ತು ಕಸ ತೆರವುಗೊಳಿಸಲು ಅವು ಹೆಚ್ಚು ಸಹಕಾರಿಯಾಗಲಿವೆ ಎಂದು ತಿಳಿಸಿದರು.
ಪ್ರಭಾತ್ ಡಿಸೈನ್ ಹಾಗೂ ಚಾಲೆಂಜರ್ ಕಂಪನಿಗಳ ವಾಹನಗಳ ಪ್ರಾತ್ಯಕ್ಷಿಕೆ ನಡೆಸಲಾಗಿದೆ. ಪ್ರಾತ್ಯಕ್ಷಿಕೆಯ ಫಲಿತಾಂಶ ಪರಿಶೀಲಿಸಿದ ಬಳಿಕ ಮುಂದಿನ ಒಂದು ತಿಂಗಳೊಳಗೆ ಮತ್ತೊಂದು ವಾಹನ ತರಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರತಿಯೊಂದು ವಾಹನವು ಸುಮಾರು 3.5 ಕ್ಯೂಬಿಕ್ ಮೀಟರ್ ಕಸ ಸಂಗ್ರಹ ಸಾಮರ್ಥ್ಯ ಹೊಂದಿದ್ದು, 12 ಸಾವಿರ ಲೀಟರ್ ನೀರು ಸಂಗ್ರಹಿಸಬಹುದಾಗಿದೆ. ರಸ್ತೆ ಸ್ವಚ್ಛಗೊಳಿಸುವುದರ ಜೊತೆಗೆ ಧೂಳು ಹರಡದಂತೆ ನೀರು ಸಿಂಪಡಿಸುವ ವ್ಯವಸ್ಥೆಯೂ ಇದೆ. ಇಂತಹ ಆಧುನಿಕ ವಾಹನಗಳು ಈಗಾಗಲೇ ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಹಾಗೂ ಮೈಸೂರು ನಗರಗಳಲ್ಲಿ ಬಳಕೆಯಲ್ಲಿವೆ ಎಂದು ತಿಳಿಸಿದರು.
ಘನತ್ಯಾಜ್ಯ ನಿರ್ವಹಣೆ–2026ರ ಹೊಸ ನಿಯಮಗಳಂತೆ ಸಾರ್ವಜನಿಕರು ಕಸವನ್ನು ನಾಲ್ಕು ವಿಭಾಗಗಳಲ್ಲಿ ವಿಂಗಡಿಸಿ ಪಾಲಿಕೆಯ ವಾಹನಗಳಿಗೆ ನೀಡಬೇಕು. ಅಂಗಡಿಗಳ ಮುಂದೆ ಕಸ ಎಸೆಯಬಾರದು ಹಾಗೂ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಹಿರಂಗವಾಗಿ ಸುಡಬಾರದು. ಇದರಿಂದ ವಾಯುಮಾಲಿನ್ಯ ಹೆಚ್ಚುವುದಲ್ಲದೆ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪ್ರಭಾತ್ ಡಿಸೈನ್ ಮತ್ತು ಚಾಲೆಂಜರ್ ಕಂಪನಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.






