Raichur | ಎಸ್‌ಐಆರ್ ಕಾರ್ಯದಲ್ಲಿ ಶೇ.100 ಸಾಧನೆ: ಬಿಎಲ್‌ಒ ತೋಟಮ್ಮಗೆ ಸನ್ಮಾನ

ರಾಯಚೂರು : ಜಿಲ್ಲೆಯ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕಾರ್ಯ ಚುರುಕುಗೊಂಡಿದ್ದು, ಚುನಾವಣಾ ಆಯೋಗದ ನಿರ್ದೇಶನದಂತೆ ಬಿಎಲ್‌ಒಗಳು ಕಾರ್ಯನಿರ್ವಹಿಸುತ್ತಿರುವ ನಡುವೆ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ತೋಟಮ್ಮ ಅವರು ಶೇ.100ರಷ್ಟು ಕಾರ್ಯ ಪೂರ್ಣಗೊಳಿಸಿ ಚುನಾವಣಾ ಆಯೋಗದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ರಾಯಚೂರು ತಾಲೂಕಿನ ಜೇಗರಕಲ್ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿಯಾಗಿರುವ ತೋಟಮ್ಮ ಅವರು 2002ರ ಮತದಾರರ ಮಾಹಿತಿಯನ್ನು 2025ರ ಮತದಾರರ ಮಾಹಿತಿಯೊಂದಿಗೆ ಮ್ಯಾಪಿಂಗ್ ಮಾಡುವುದು, ಎಸ್‌ಐಆರ್ ಗಣತಿ (ಎನ್ಯುಮರೇಶನ್) ನಮೂನೆಗಳನ್ನು ಮನೆಮನೆಗೆ ವಿತರಿಸುವುದು, ಮತದಾರರಿಂದ ಭರ್ತಿ ಮಾಡಿದ ಅರ್ಜಿಗಳನ್ನು ಸಂಗ್ರಹಿಸುವುದು ಹಾಗೂ ಬಿಎಲ್‌ಒ ಆ್ಯಪ್ ಮೂಲಕ ಡಿಜಿಟಲೀಕರಣ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ತಾಲೂಕಿನಲ್ಲಿ ಎಸ್‌ಐಆರ್ ಪ್ರಕ್ರಿಯೆಯನ್ನು ಶೇ.100ರಷ್ಟು ಪೂರ್ಣಗೊಳಿಸಿದ ಮೊದಲ ಬಿಎಲ್‌ಒ ಎಂಬ ಹೆಗ್ಗಳಿಕೆಗೆ ತೋಟಮ್ಮ ಪಾತ್ರರಾಗಿದ್ದು, ಅವರ ಕರ್ತವ್ಯನಿಷ್ಠೆ ಮತ್ತು ಕಾರ್ಯಕ್ಷಮತೆಯನ್ನು ರಾಯಚೂರು ತಾಲೂಕು ಪಂಚಾಯಿತಿ ಆಡಳಿತ ಹಾಗೂ ತಹಶೀಲ್ದಾರ್ ಕಚೇರಿ ಪ್ರಶಂಸಿಸಿ ಸನ್ಮಾನಿಸಿದೆ.




