ರಾಯಚೂರು | 11ನೇ ಕೃಷಿ ಗಣತಿ: ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆ

ರಾಯಚೂರು : 2021-22ನೇ ಸಾಲಿನ 11ನೇ ಕೃಷಿ ಗಣತಿಯ 2ನೇ ಹಂತದ ಕ್ಷೇತ್ರಕಾರ್ಯ ಪೂರ್ಣಗೊಳಿಸುವ ಸಂಬಂಧ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯು ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ನೂತನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಹೊಸ ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲು ಮತ್ತು ಅವುಗಳ ಪ್ರಗತಿಯನ್ನು ಮೌಲ್ಯಮಾಪನ ಮಾಡಲು ಅಗತ್ಯವಿರುವ ತಾಲೂಕು ಗ್ರಾಮಮಟ್ಟದ ದತ್ತಾಂಶವನ್ನು ಒದಗಿಸುವುದು ಮತ್ತು ಭವಿಷ್ಯದ ಕೃಷಿ ಸಮೀಕ್ಷೆಗಳನ್ನು ಕೈಗೊಳ್ಳಲು ಸಾಗುವಳಿ ಹಿಡುವಳಿಗಳ ಅಂಕಿ ಅಂಶಗಳ ಚೌಕಟ್ಟನ್ನು ಒದಗಿಸುವುದು ಕೃಷಿ ಗಣತಿಯ ಉದ್ದೇಶವಾಗಿದೆ ಎಂದು ತಿಳಿಸಿದರು.
2024ರ ಆಗಸ್ಟ್ ಮಾಹೆಯಲ್ಲಿ 1ನೇ ಹಂತದ ಕೃಷಿಗಣತಿಯ ಕುರಿತು ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆ ನಡೆಸಿ ವರದಿಯನ್ನು ಅಂತಿಮಗೊಳಿಸಲಾಗಿದೆ. ಪ್ರಸ್ತುತ ರಾಜ್ಯಾದ್ಯಂತ 2021-22ನೇ ಸಾಲಿನ ಮಾಹಿತಿ ಆಧರಿಸಿ 11ನೇ ಕೃಷಿ ಗಣತಿಯ 2ನೇ ಹಂತದ ಗಣತಿ ಕಾರ್ಯವನ್ನು ಪೂರ್ಣಗೊಳಿಸಿದ್ದು, ಅದರಲ್ಲಿ ಸಕಾಲಿಕ ವರದಿ ಯೋಜನೆಗೆ ಆಯ್ಕೆಯಾದ ಗ್ರಾಮಗಳಲ್ಲಿ ಭೂಬಳಕೆ ವಿವರಗಳು, ನೀರಾವರಿಯ ಮೂಲಗಳು, ನೀರಾವರಿಯಾದ ಕ್ಷೇತ್ರ ಮತ್ತು ವಿವಿಧ ಬೆಳೆಗಳ ವಿಸ್ತೀರ್ಣದ ಮಾಹಿತಿಯನ್ನು ಇದೆ ಮೊದಲ ಬಾರಿಗೆ ಮೊಬೈಲ್ ಆಪ್ ಮೂಲಕ ಕ್ಷೇತ್ರ ಕಾರ್ಯಕೈಗೊಳ್ಳಲಾಗಿದೆ. ಈ ಮಾಹಿತಿಯನ್ನು ಸಂಗ್ರಹಿಸಿ ಇಡೀ ತಾಲೂಕಿಗೆ ಹಾಗೂ ಜಿಲ್ಲೆಗೆ ಅನ್ವಯವಾಗುವಂತೆ ಎಸ್ಟಿಮೇಟ್ ವರದಿಯನ್ನು ತಯಾರಿಸಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾಮಟ್ಟದ ಸಮನ್ವಯ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾಗಿರುವ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳಾದ ಡಾ.ತಿಪ್ಪಣ್ಣ ಅವರು, ಕೃಷಿ ಗಣತಿಯ ಹಿನ್ನೆಲೆ, ಕೃಷಿ ಗಣತಿಯ ವಿಧಾನ, 11ನೇ ಕೃಷಿ ಗಣತಿಯ 1ನೇ ಹಂತದ ಕಾರ್ಯಕ್ಷೇತ್ರದ ಬಗ್ಗೆ ತಿಳಿಸಿದರು.
ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರು, ಭೂ ದಾಖಲೆಗಳ ಉಪ ನಿರ್ದೇಶಕರು, ಜಿಲ್ಲಾ ಎನ್‌ಐಸಿ ಅಧಿಕಾರಿ, ಸಹಾಯಕ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಶರಣಪ್ಪ, ವಿವಿಧ ವಿಷಯಗಳ ವಿಷಯ ನಿರ್ವಾಹಕರು ಇದ್ದರು.







