ರಾಯಚೂರು | ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘದ ಪದಾಧಿಕಾರಿಗಳ ಬಗ್ಗೆ ಹಗುರವಾಗಿ ಮಾತನಾಡಿದ ಆರ್.ಮಾನಸಯ್ಯ ಮೇಲೆ ಕ್ರಮಕ್ಕೆ ಒತ್ತಾಯ

ರಾಯಚೂರು : ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘದ ಹಕ್ಕುಗಳಿಗಾಗಿ ಹೋರಾಟ ನಡೆಸಿ ಫಲಿತಾಂಶ ತಂದುಕೊಟ್ಟಿರುವ ನಮ್ಮ ಸಂಘದ ಬಗ್ಗೆ ಹಗುರವಾಗಿ ಮಾತನಾಡಿದರೆ ಕಾನೂನು ಕ್ರಮಕ್ಕೆ ದೂರು ದಾಖಲಿಸಲಾಗುವುದು ಎಂದು ಸಂಘದ ಅಧ್ಯಕ್ಷ ಕೆ.ನಾಗಲಿಂಗಸ್ವಾಮಿ ವಕೀಲ ಎಚ್ಚರಿಕೆ ನೀಡಿದರು.
ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿರವಾರ ತಾಲೂಕಿನಲ್ಲಿ ನಡೆದ ಹೋರಾಟದ ವೇಳೆ ಮತ್ತೊಂದು ಸಂಘದ ಅಧ್ಯಕ್ಷ ಆರ್.ಮಾನಸಯ್ಯ ನಮ್ಮ ಸಂಘದ ಪದಾಧಿಕಾರಿಗಳನ್ನು “ಹುಚ್ಚು ನಾಯಿ” ಎಂದು ಅವಹೇಳನ ಮಾಡಿರುವುದು ಖಂಡನೀಯ. ಜೊತೆಗೆ, ನಾಲ್ಕು ವರ್ಷಗಳಿಂದ ಹೋರಾಟ ಮಾಡಿಲ್ಲವೆಂದು ಹೇಳಿ “ಹೋರಾಟ ಮಾಡದ ಸಂಘವು ಮಕ್ಕಳನ್ನು ಹೆರದ ಹೆಣ್ಣು ಬಂಜೆ” ಎಂದು ಹೋಲಿಕೆ ಮಾಡಿದ ಮೂಲಕ ಮಹಿಳೆಯರ ವಿರುದ್ಧ ಅವಮಾನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾಧಿಕಾರಿಗೆ ಸಲ್ಲಿಸಿದ ಪತ್ರದಲ್ಲಿ, ನಿರಂತರ ಹೋರಾಟವಿಲ್ಲದೆ ಸಹ ಕಾರ್ಮಿಕರ ವೇತನ, ಭವಿಷ್ಯ ನಿಧಿ ಮತ್ತು ಆರೋಗ್ಯ ವಿಮೆ ಪಾವತಿ ಆಗುವಂತೆ ಮಾಡಿದ್ದೇವೆ ಎಂದು ಸ್ಪಷ್ಟವಾಗಿ ತಿಳಿಸಿದ್ದೇವೆ. ಆದರೆ ಅದನ್ನು ತಪ್ಪಾಗಿ ಅರ್ಥಮಾಡಿಕೊಂಡು ಅವಹೇಳನಕಾರಿ ಮಾತು ಆಡಿದ್ದಾರೆ ಎಂದು ಹೇಳಿದರು.
ಮಹಿಳೆಯರಿಗೆ ಅವಮಾನ ಮಾಡಿದ ಆರ್.ಮಾನಸಯ್ಯ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ವೇಳೆ ಪ್ರಧಾನ ಕಾರ್ಯದರ್ಶಿ ಎಂ.ಬಸವರಾಜ, ಮುಖಂಡರಾದ ರಾಮರೆಡ್ಡಿ ಕಲ್ಮಲಾ, ಬಸವರಾಜ ಸಾಲಮನಿ ಬಾಗಲವಾಡ, ಜಗದೀಶ್, ಭೀಮಣ್ಣ, ನಿಸಾರ್ ಅಹಮದ್, ಹಸನ್ ಸಾಬ್, ಮಾರಣ್ಣ, ಚಿನ್ನಿ ಸೇರಿದಂತೆ ಅನೇಕರು ಹಾಜರಿದ್ದರು.







