Raichur | ಪೆಟ್ರೋಲ್ ಬಂಕ್ ಬಳಿ ಡಿಸೇಲ್‌ಗಾಗಿ ಪರದಾಟ; ರೈತರ ಆಕ್ರೋಶ

ರಾಯಚೂರು : ರಾಯಚೂರು ನಗರ, ಲಿಂಗಸುಗೂರು, ದೇವದುರ್ಗ ಸೇರಿ ಜಿಲ್ಲೆಯಾದ್ಯಂತ ಕ್ಯಾನ್ ಗಳಲ್ಲಿ ಡಿಸೇಲ್ ಹಾಕುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ಹಲವೆಡೆ ಡೀಸೆಲ್ ಕೊರತೆ ಮತ್ತು ಬೆಲೆ ಏರಿಕೆಯ ಪರಿಣಾಮ ವಾಹನ ಸವಾರರು ಹಾಗೂ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಪೆಟ್ರೋಲ್ ಬಂಕ್‌ಗಳಲ್ಲಿ ಡೀಸೆಲ್‌ಗಾಗಿ ವಾಹನಗಳ ಉದ್ದ ಸಾಲು ಕಂಡುಬಂದಿದ್ದು, ಕೆಲವೆಡೆ ನಿಯಂತ್ರಿತ ಪ್ರಮಾಣದಲ್ಲಿ ಮಾತ್ರ ಡೀಸೆಲ್ ವಿತರಣೆ ಮಾಡಲಾಗುತ್ತಿದೆ.
ಮುಂಗಾರು ಸನೀಹವಾಗಿದ್ದು, ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿರುವ ಸಮಯದಲ್ಲಿ ಟ್ರ್ಯಾಕ್ಟರ್, ಜನರೇಟರ್ ಹಾಗೂ ಸರಕು ಸಾಗಣೆ ವಾಹನಗಳಿಗೆ ಡೀಸೆಲ್ ಅಗತ್ಯ ಹೆಚ್ಚಾಗಿದೆ. ಆದರೆ ಬೇಡಿಕೆಗೆ ತಕ್ಕಂತೆ ಸರಬರಾಜು ಆಗದ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಲವು ಗಂಟೆಗಳ ಕಾಲ ಬಂಕ್‌ಗಳ ಮುಂದೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೆಲವು ಪೆಟ್ರೋಲ್ ಬಂಕ್‌ಗಳಲ್ಲಿ ಒಂದು ವಾಹನಕ್ಕೆ 20 ರಿಂದ 50 ಲೀಟರ್‌ವರೆಗೆ ಮಾತ್ರ ಡೀಸೆಲ್ ನೀಡಲಾಗುತ್ತಿದೆ ಎನ್ನಲಾಗಿದೆ. ಇದರಿಂದ ರೈತರು ಕೃಷಿ ಕಾರ್ಯಗಳಲ್ಲಿ ವಿಳಂಬ ಎದುರಿಸುತ್ತಿದ್ದು, ಸರಕು ಸಾಗಣೆ ವಾಹನಗಳ ಸಂಚಾರಕ್ಕೂ ತೊಂದರೆ ಉಂಟಾಗಿದೆ.
ಸಮಸ್ಯೆ ಕುರಿತು ತೈಲ ಕಂಪನಿಗಳು ಹಾಗೂ ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಂಡು ಸಮರ್ಪಕ ಡೀಸೆಲ್ ಸರಬರಾಜು ಖಚಿತಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪ್ರತಿಭಟನೆ: ನಗರದ ಗಂಜ್ ಹಾಗೂ ಗಾಂಧಿ ಚೌಕ್ ಬಳಿಯ ಗೋವಿಂದರಾವ್ ಪೆಟ್ರೊಲ್ ಬಂಕ್ ಬಳಿ ರೈತರು ಕ್ಯಾನ್ ನಲ್ಲಿ ಡೀಸೆಲ್ ಹಾಕಿಲ್ಲ ಎಂದು ಆರೋಪಿಸಿ ಬಂಕ್ ಬಳಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.






