Raichur | ಝಮೀರ್ ಅಹ್ಮದ್‌ಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

ರಾಯಚೂರು : ರಾಜ್ಯ ಸರಕಾರದಲ್ಲಿ ಮುಸ್ಲಿಂ ಸಮುದಾಯಕ್ಕೆ ನ್ಯಾಯಯುತ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಹಾಗೂ ಹಿರಿಯ ನಾಯಕ ಝಮೀರ್ ಅಹ್ಮದ್ ಖಾನ್ ಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ರಾಯಚೂರು ಜಿಲ್ಲಾ ಮುಸ್ಲಿಂ ಸಮಿತಿಯ ನೇತೃತ್ವದಲ್ಲಿ ನಗರದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶೇ.100ರಷ್ಟು ಮುಸ್ಲಿಮರು ಕಾಂಗ್ರೆಸ್ ಪಕ್ಷಕ್ಕೆ ಮತದಾನ ಮಾಡಿದ ಪರಿಣಾಮ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದೆ. ಆದರೆ ಸರಕಾರದಲ್ಲಿ ಮುಸ್ಲಿಂ ಸಮುದಾಯಕ್ಕೆ ನ್ಯಾಯಯುತ ರಾಜಕೀಯ ಪ್ರಾತಿನಿಧ್ಯ ನೀಡದೇ ಅನ್ಯಾಯ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಮುಖಂಡರು ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲು ಮುಸ್ಲಿಂ ಸಮುದಾಯದ ಬೆಂಬಲ ಪ್ರಮುಖ ಪಾತ್ರ ವಹಿಸಿದೆ. ಆದಾಗ್ಯೂ, ಸರಕಾರ ರಚನೆಯಾದ ಬಳಿಕ ಸಮುದಾಯಕ್ಕೆ ಸಿಗಬೇಕಾದ ರಾಜಕೀಯ ಸ್ಥಾನಮಾನ ಮತ್ತು ಪ್ರಾತಿನಿಧ್ಯ ಸಮರ್ಪಕವಾಗಿ ದೊರೆಯುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮೌಲಾನಾ ಶೇಖ್ ಫರೀದ್, ಮೌಲಾನಾ ರಫೀಕ್ ಸಾಬ್, ಮೌಲಾನಾ ಆರೀಫ್ ಸಾಬ್, ಅತಿಫ್ ಸಾಬ್, ಇಮ್ರಾನ್ ಬಡೆಸಾಬ್, ಮೊಹಮ್ಮದ್ ರಫೀಕ್, ಚಂದ್ ಪಾಶಾ, ಹಬೀಬ್ ಗೋನಾಳ್, ಫಾರೂಕ್ ಯರಗೇರ ಸೇರಿದಂತೆ ಮುಸ್ಲಿಂ ಸಮುದಾಯದ ಮುಖಂಡರು, ಧಾರ್ಮಿಕ ಗುರುಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.






